ವಿದೇಶಿ ಹಣ್ಣುಗಳನ್ನು ಬೆಳೆಯಲು ಸಲಹೆ

Tips for growing exotic fruits
Published on

ಮಡಿಕೇರಿ:

ಬೇಡಿಕೆ ಇರುವ ವಿದೇಶಿ ಹಣ್ಣುಗಳನ್ನು ಸ್ಥಳೀಯವಾಗಿ ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸುವ ಕಡೆಗೆ ಗಮನಹರಿಸಬಹುದಾಗಿದೆ ಎಂದು ಭಾರತ ಸರ್ಕಾರದ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ ನಿರ್ದೇಶಕ ಕೆ.ಎನ್. ವರ್ಮ ಹೇಳಿದರು. ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶನಿವಾರ ನಡೆದ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತಾ ಮೇಳ ಉದ್ಘಾಟಿಸಿ ಮಾತನಾಡಿದರು.

ಕೃಷಿಕರ ಅನುಕೂಲತೆ ದೃಷ್ಟಿಯಿಂದ ದೇಶಾದ್ಯಂತ ಇಂಥ 53 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆಸಕ್ತ ಬೆಳೆಗಾರರಿಗೆ ರೋಗಮುಕ್ತವಾದ ಆರೋಗ್ಯವಂತ ಗಿಡಗಳನ್ನು ಕೊಡುವುದು ಸವಾಲು. ಈ ಸವಾಲನ್ನು ಎದುರಿಸಲು ಇಲಾಖೆ ವತಿಯಿಂದ ಯೋಜನೆ ರೂಪಿಸಲಾಗಿದೆ. ನಿರಂತರ ಸಂಶೋಧನೆಗಳ ಮೂಲಕ ಗುಣಮಟ್ಟದ ಗಿಡಗಳನ್ನು ಒದಗಿಸುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿರುತ್ತದೆ ಎಂದರು.

ಬೆಣ್ಣೆಹಣ್ಣು ಕೃಷಿಯ ಮಾಹಿತಿ ಕೊಡುವ ಕೈಪಿಡಿ ಬಿಡುಗಡೆ ಮಾಡಿದ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ತೋಟಗಾರಿಕೆ)ಮಹಾ ನಿರ್ದೇಶಕ ಡಾ. ಎಸ್.ಕೆ. ಸಿಂಗ್ ಮಾತನಾಡಿ, ಕೃಷಿಕರು ಯಾವುದೇ ಬೆಳೆಯನ್ನು ಬೆಳೆಯುವುದಕ್ಕೂ ಮೊದಲು ವ್ಯಾಪಾರಿ ದೃಷ್ಟಿಕೋನದಿಂದ ಯೋಚಿಸಬೇಕು. ಹಣ್ಣಿನ ಬೆಳೆಗಳನ್ನು ಬೆಳೆಯಲು ಕೊಡಗಿನ ಹವಾಮಾನ ಹೆಚ್ಚು ಸೂಕ್ತವಾಗಿದೆ.

ಬೆಣ್ಣೆಹಣ್ಣು ಸೇರಿದಂತೆ ವಿವಿಧ ಬೆಳೆಗಳನ್ನು ಕಾಫಿಗೆ ಸಮಾನಾಂತರವಾಗಿ ಬೆಳೆಯುವ ಮೂಲಕ ಬೆಳೆಗಾರರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು. ಈಗಿನ ತಂತ್ರಜ್ಞಾನ ಮತ್ತು ಆಧುನಿಕತೆ ಸಹಾಯದಿಂದ ಹೊಸ ಹೊಸ ಬೆಳೆಗಳನ್ನು ಬೆಳೆಯುವುದರ ಕಡೆಗೆ ಕೃಷಿಕರು ಚಿಂತನೆ ನಡೆಸಬೇಕು. ಹೆಚ್ಚು ಆಮದು ಮಾಡಿಕೊಳ್ಳುವ ಹಣ್ಣಿನ ಬೆಳೆಗಳನ್ನು ಸ್ಥಳೀಯವಾಗಿ ಬೆಳೆದು ಮಾರುಕಟ್ಟೆ ಸೃಷ್ಟಿ ಮಾಡುವ ಮೂಲಕ ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳಕ್ಕೂ ಕೊಡುಗೆ ನೀಡಬಹುದಾಗಿದೆ. ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಮತ್ತು ವೈವಿಧ್ಯತಾ ಮೇಳಗಳಂಥ ಕಾರ್ಯಕ್ರಮಗಳು ಕೃಷಿಕರು ಮತ್ತು ವಿಜ್ಞಾನಿಗಳ ಮಧ್ಯೆ ಉತ್ತಮ ಸಂಬAಧ ಏರ್ಪಾಡಾಗಲು ಸಹಕಾರಿ ಆಗುತ್ತದೆ ಎಂದು ಹೇಳಿದರು.

ಪ್ರಗತಿಪರ ಕಾಫಿ ಬೆಳೆಗಾರ ಬೋಸ್ ಮಂದಣ್ಣ ಮಾತನಾಡಿ ಕೊಡಗು ರಾಜ್ಯವಿದ್ದಾಗ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಆರಂಭವಾಯಿತು. ಪ್ರಮುಖವಾಗಿ ಕೊಡಗಿನ ಕಿತ್ತಳೆಯನ್ನು ಅಭಿವೃದ್ಧಿಪಡಿಸಲು ಈ ಕೇಂದ್ರ ಶುರುಮಾಡಲಾಯಿತು. ಕೊಡಗಿನ ಕಿತ್ತಳೆಗೆ ಈಗ ಭೌಗೋಳಿಕ ಮಾನ್ಯತೆ ಸಿಕ್ಕಿದೆ. ಆದರೆ ಕೊಡಗಿನಲ್ಲಿ ಕಿತ್ತಳೆಯೇ ಸಿಗುತ್ತಿಲ್ಲ. ಕೊಡಗಿನ ಕಿತ್ತಳೆಗೆ ಹಳೆ ವೈಭವ ಮರಳಿ ತರುವ ನಿಟ್ಟಿನಲ್ಲಿ ಕೇಂದ್ರ ಕೆಲಸ ಮಾಡುತ್ತಿದ್ದು, ಆದಷ್ಟು ಶೀಘ್ರ ಇದರಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಕೊಡಗು ಪುಟ್ಟ ಜಿಲ್ಲೆಯಾದರೂ ಇಲ್ಲಿಯ ಮಣ್ಣು, ಹವಾಮಾನ, ಮಳೆ, ತಾಪಮಾನ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಹಾಗಾಗಿ ಇಲ್ಲಿ ಕೃಷಿ ಪದ್ಧತಿ ಬಗ್ಗೆಯೂ ವಿಜ್ಞಾನಿಗಳು ಚಿಂತಿಸಬೇಕಾಗಿದೆ ಎಂದರು.
ಬೆAಗಳೂರು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ನಿರ್ದೇಶಕ ಡಾ. ಪ್ರಕಾಶ್ ಪಾಟೀಲ್ ಮಾತನಾಡಿ ಚೆಟ್ಟಳ್ಳಿಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರ ಮೂಲಕ ಇನ್ನು ಕೆಲವೇ ವರ್ಷಗಳಲ್ಲಿ ಕೊಡಗಿನ ಕಿತ್ತಳೆಯ ನೈಜ ಸ್ವಾದ ಮತ್ತೆ ಉಣ ಬಡಿಸಲಾಗುವುದು. ಈ ನಿಟ್ಟಿನಲ್ಲಿ 2.30 ಕೋಟಿ ರೂ. ವೆಚ್ಚದಲ್ಲಿ ಕಾರ್ಯಯೋಜನೆ ಸಿದ್ಧವಾಗಿದ್ದು ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಬೆಳೆಗಾರರ ಸಹಭಾಗಿತ್ವದಲ್ಲಿ ಕೊಡಗಿನ ಕಿತ್ತಳೆ ಪುನಶ್ಚೇತನ ಕೆಲಸ ಶುರುಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚೆಟ್ಟಳ್ಳಿ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದ ನಿರ್ದೇಶಕ ಡಾ. ರಾಜೀಂದ್ರನ್ ಎಸ್. ವೇದಿಕೆಯಲ್ಲಿ ಇದ್ದರು.
ಬೆಳೆಗಾರರಿಗೆ ಅನುಕೂಲವಾಗುವ ಅಧಿಕ ಮೌಲ್ಯದ ವಿದೇಶಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘವನ್ನು ಇದೇ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು. ಸಂಘದ ಲಾಂಛನ ಮತ್ತು ವೆಬ್‌ಸೈಟ್ ಕೂಡ ಅನಾವರಣ ಮಾಡಲಾಯಿತು.
ಸಭಾ ಕಾರ್ಯಕ್ರಮದ ನಂತರ ನಡೆದ ಕಾರ್ಯಗಾರದಲ್ಲಿ ‘ಭಾರತದಲ್ಲಿ ಬೆಣ್ಣೆಹಣ್ಣಿನ ಕೃಷಿ ನಿರೀಕ್ಷೆಗಳು ಮತ್ತು ಸಮಸ್ಯೆಗಳು’ ಎನ್ನುವ ವಿಷಯದಲ್ಲಿ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಮುರುಳೀಧರ್ ಬಿ.ಎಂ. ಮತ್ತು ‘ಬೆಣ್ಣೆಹಣ್ಣಿನಲ್ಲಿ ಪ್ರಮುಖ ಕೀಟ ಮತ್ತು ರೋಗಗಳು ಅವುಗಳ ನಿರ್ವಹಣೆಯ ಬಗ್ಗೆ ಕೀಟ ವಿಜ್ಞಾನಿ ಡಾ. ರಾಣಿ ಎ.ಟಿ ಮಾಹಿತಿ ನೀಡಿದರು. ಸುಮಾರು 270ಕ್ಕೂ ಅಧಿಕ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರೈತ -ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಮತ್ತು ಕೇಂದ್ರದಲ್ಲಿ ಬೆಳೆಯಲಾದ ಬಟರ್ ಫ್ರೂಟ್ ಹಣ್ಣಿನ ಕ್ಷೇತ್ರದ ಭೇಟಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net