ಟಿಪ್ಪು ಜಯಂತಿ ರದ್ದು ಆದೇಶ ಮುಂದುವರಿಕೆ

Tippu Jayanti
Published on

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿ ಸರ್ಕಾರ 2019ರ ಜು.30 ರಂದು ಹೊರಡಿಸಿದ್ದ ಆದೇಶ ಮುಂದುವರಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ.

ರಾಜ್ಯ ಸರ್ಕಾರದ ಆದೇಶ ರದ್ದು ಪಡಿಸುವಂತೆ ಕೋರಿ ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿದ್ದ ಅರ್ಜಿ ಸಿಜೆ ನೇತೃತ್ವದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜ್ಯದಲ್ಲಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವುದನ್ನು ರದ್ದುಪಡಿಸಿ 2019ರ ಜು. 30ರಂದು ಹೊರಡಿಸಿದ ಆದೇಶ ಮರುಪರಿಶೀಲಿಸುವಂತೆ ಮತ್ತು ಸರ್ಕಾರದಿಂದ ಆಚರಿಸಲ್ಪಡುವ ಇತರ ಗಣ್ಯರು ಮತ್ತು ಮಹನೀಯರ ಜಯಂತಿಗಳ ಬಗ್ಗೆಯೂ ವಿವರ ನೀಡುವಂತೆ ಹೈಕೋರ್ಟ್ 2019ರ ನ.6ರಂದು ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ. ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿದ ಆದೇಶ ಮುಂದುವರಿಸಲು ಮಾ.11ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದ್ದು, ಅದರ ಸಂಪೂರ್ಣ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ.

ಇತರ ಗಣ್ಯರು ಮತ್ತು ಮಹನೀಯರ ಜಯಂತಿಗಳ ಬಗ್ಗೆಯೂ ವಿವರಗಳು ಸಿದ್ಧವಿದ್ದು, ಕ್ರೋಡೀಕರಿಸಿ ಸಲ್ಲಿಸಲಾಗುವುದು ಎಂದು ಸರ್ಕಾರಿ ಪರ ವಕೀಲರು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಏ.8ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net