ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೊಡಗು ಜನತೆ

Untitled
Published on

ಮಡಿಕೇರಿ:

ಜಿಲ್ಲೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಗೆ ಕೊಕ್ ನೀಡುವ ಮೂಲಕ ನೂತನ ಕಾಂಗ್ರೆಸ್ ಸರ್ಕಾರ ಆರಂಭದಲ್ಲೇ ರಕ್ಷಣಾತ್ಮಕ ಆಟದ ಮುನ್ಸೂಚನೆ ಕೊಟ್ಟಿದೆ. ಪ್ರಬಲ ರಾಜಕೀಯ ಅಸ್ತ್ರವೊಂದರ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಇದರಿಂದ ನಿರಾಸೆ ಆದಂತಾಗಿದೆ. ಸರ್ಕಾರದ ಈ ನಿರ್ಧಾರದಿಂದ ಕೊಡಗಿನ ಜನತೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೂ ಅನುಕೂಲ ಆಗಲಿದೆ.

೨೦೧೫ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಟಿಪ್ಪು ಜಯಂತಿಯನ್ನು ರಾಜ್ಯಾದ್ಯಂತ ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು ಎನ್ನುವ ಪ್ರಕಟಣೆ ಹೊರಬಿದ್ದಿತ್ತು. ಇದಕ್ಕೆ ಕೂಡಲೇ ಕೊಡಗಿನಲ್ಲಿ ವಿರೋಧದ ಧ್ವನಿ ಹುಟ್ಟಿಕೊಂಡಿತು. ಬಹುಸಂಖ್ಯಾತ ಸಮುದಾಯದ ಪ್ರಮುಖರು ಟಿಪ್ಪು ಜಯಂತಿ ವಿರುದ್ಧ ಹೇಳಿಕೆಗಳನ್ನು ಕೊಡುವುದು, ಪ್ರತಿಭಟನೆಗಳನ್ನು ನಡೆಸುವ ಮೂಲಕವೂ ತಮ್ಮ ವಿರೋಧ ವ್ಯಕ್ತಪಡಿಸಲಾರಂಭಿಸಿದ್ದರು. ಮತ್ತೊಂದು ಕಡೆ ಟಿಪ್ಪು ಜಯಂತಿ ಪರವೂ ಧ್ವನಿ ಕೇಳಿಬಂದು ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಅನಗತ್ಯ ಸಂಘರ್ಷದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು.

ಪರ ವಿರೋಧಗಳ ಮಧ್ಯೆಯೇ ರಾಜ್ಯದ ಎಲ್ಲೆಡೆಯಂತೆ ಸರ್ಕಾರ ಕೊಡಗಿನಲ್ಲೂ ಟಿಪ್ಪು ಜಯಂತಿ ಆಚರಿಸಲು ಮುಂದಾದಾಗ ಜಿಲ್ಲೆಯಲ್ಲಿ ದೊಡ್ಡಮಟ್ಟದ ಗಲಾಟೆಯೇ ನಡೆದುಹೋಗಿತ್ತು. ಇದರಿಂದಾಗಿ ಇಬ್ಬರು ಪ್ರಾಣವನ್ನೂ ಕಳೆದುಕೊಳ್ಳುವಂತಾಯಿತು. ಹಾಗಾಗಿ ಟಿಪ್ಪು ಜಯಂತಿಯ ಪರ-ವಿರೋಧ ನಿಲುವುಗಳಿಂದ ನವೆಂಬರ್ ಬಂತೆಂದರೆ ಸಾಕು ಕೊಡಗಿನಲ್ಲಿ ಆತಂಕದ ಕಾರ್ಮೋಡ ಕಂಡುಬರುತ್ತಿತ್ತು. ನಂತರ ೨೦೧೬, ೨೦೧೭,೨೦೧೮ರಲ್ಲೂ ಪರ-ವಿರೋಧ ಅಭಿಪ್ರಾಯಗಳ ಮಧ್ಯೆಯೇ ಜಿಲ್ಲಾ ಕೇಂದ್ರ ಮಡಿಕೇರಿ, ತಾಲೂಕು ಕೇಂದ್ರಗಳಾದ ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಸರ್ಕಾರದ ವತಿಯಿಂದ ಪೊಲೀಸ್ ಭದ್ರಕೋಟೆಯಲ್ಲಿ ಟಿಪ್ಪು ಜಯಂತಿ ಆಚರಿಸಿಕೊಂಡು ಬರಲಾಗುತ್ತಿತ್ತು.

ಟಿಪ್ಪು ಜಯಂತಿ ಆಚರಣೆಯ ಮೂರೂ ವರ್ಷಗಳಲ್ಲೂ ಕೊಡಗು ಬಂದ್ ನಡೆಸಲಾಗಿತ್ತು. ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡುತ್ತಿತ್ತು. ಒಟ್ಟಾರೆ ಕೊಡಗಿನಲ್ಲಿ ಅಘೋಷಿತ ಕರ್ಫ್ಯೂ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಕಂಡುಬರುತ್ತಿತ್ತು. ಜಿಲ್ಲೆಯಲ್ಲಿ ಪ್ರತಿ ವರ್ಷವೂ ನವೆಂಬರ್‌ನಲ್ಲಿ ’ನವೆಂಬರ್ ಮೇನಿಯಾ’ ನಿರ್ಮಾಣ ಆಗುತ್ತಿತ್ತು. ಕಾಂಗ್ರೆಸ್‌ನಂತೆ ಬಿಜೆಪಿಯೂ ಈ ವಿಷಯವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ನಂತರ ರಾಜಕೀಯವಾಗಿ ಕೂಡ ಬಿಜೆಪಿಗೆ ಹೆಚ್ಚಿನ ಲಾಭ ಆಗಿತ್ತು.

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ನಿಲ್ಲಿಸುವುದಾಗಿ ಬಿಜೆಪಿ ಕೊಟ್ಟಿದ್ದ ಭರವಸೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಈಡೇರಿಸಿದ್ದರು. ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ವಿರೋಧ ಕಂಡುಬಂತಾದರೂ ನಂತರದ ದಿನಗಳಲ್ಲಿ ತಣ್ಣಗಾಯಿತು. ಹಾಗಾಗಿ ನಂತರದ ವರ್ಷಗಳಲ್ಲಿ ಕೊಡಗು ’ನವೆಂಬರ್ ಮೇನಿಯಾ’ದಿಂದ ಪಾರಾಗುವುದರ ಜತೆಗೆ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪುನಃ ಟಿಪ್ಪು ಜಯಂತಿ ಆಚರಣೆ ಶುರು ಮಾಡಬಹುದು ಎನ್ನುವ ಆತಂಕ ಕೊಡಗಿನವರಲ್ಲಿ ಇತ್ತು. ಈ ಚುನಾವಣೆಯಲ್ಲೂ ಬಿಜೆಪಿ ಇದೇ ವಿಷಯವನ್ನು ಪ್ರಸ್ತಾಪ ಮಾಡಿಕೊಂಡು ಮತ ಯಾಚನೆ ನಡೆಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಈಗ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಕೊಡಗಿನ ಜನರ ಭಾವನೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಟ್ಟಿದೆ. ಈ ಮೂಲಕ ರಾಜಕೀಯ ಲಾಭದ ನಿರೀಕ್ಷೆಯಲ್ಲಿದ್ದ ಬಿಜೆಪಿಗೂ ಮಾಸ್ಟರ್ ಸ್ಟ್ರೋಕ್ ಕೊಟ್ಟಂತಾಗಿದ್ದು, ಕೊಡಗಿನ ಜನತೆಯೂ ನಿರಾಳರಾಗುವಂತಾಗಿದೆ.

ಟಿಪ್ಪು ಜಯಂತಿ ಆಚರಣೆ ಶುರುವಾದಲ್ಲಿಂದ ಹುಟ್ಟಿಕೊಂಡಿದ್ದ ಆತಂಕದ ಕಾರ್ಮೋಡ ಜಿಲ್ಲೆಯ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಟ್ಟಿತ್ತು. ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ ಬೆಲೆ ಅನಿಶ್ಚಿತತೆಯಿಂದಾಗಿ ಜನತೆ ಕಂಗಾಲಾಗಿದ್ದಾಗ ಕೈಹಿಡಿದದ್ದು ಪ್ರವಾಸೋದ್ಯಮ. ಆದರೆ ಪ್ರವಾಸೋದ್ಯ ಉತ್ತುಂಗದಲ್ಲಿದ್ದ ೨೦೧೫ರ ಸಮಯದಲ್ಲೇ ಟಿಪ್ಪು ಜಯಂತಿ ಸಂಬಂಧ ಗಲಾಟೆಗಳು ಆರಂಭವಾಗಿದ್ದರಿಂದ ಪ್ರವಾಸೋದ್ಯಮ ನಲುಗಿ ಹೋಯಿತು. ಅಂದು ಸಿಕ್ಕಿದ ಏಟಿನಿಂದ ಚೇತರಿಸಿಕೊಳ್ಳಲು ಜಿಲ್ಲೆಯ ಪ್ರವಾಸೋದ್ಯಮ ಪ್ರಯಾಸಪಡುತ್ತಿರುವಾಗಲೇ ಸತತ ಎರಡು ವರ್ಷ ಕಾಡಿದ ಪ್ರಕತಿ ವಿಕೋಪ, ನಂತರ ಮತ್ತೆ ೨ ವರ್ಷ ಕೊರೊನಾ ಹಾವಳಿ ಪ್ರವಾಸೋದ್ಯಮಿಗಳನ್ನು ಮತ್ತಷ್ಟು ಕಂಗೆಡೆಸಿತ್ತು. ಇದೀಗ ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿರುವ ಹಂತದಲ್ಲಿ ಟಿಪ್ಪು ಜಯಂತಿಗೆ ಕೊಕ್ ಕೊಟ್ಟಿರುವ ಸರ್ಕಾರದ ನಿರ್ಧಾರದಿಂದ ತಮ್ಮ ಉದ್ಯಮಕ್ಕೂ ಅನುಕೂಲವಾಗಲಿದೆ ಎನ್ನುತ್ತಾರೆ ಪ್ರವಾಸೋದ್ಯಮಿಗಳು.

ಯಾವುದೇ ಸರ್ಕಾರ ಬಂದರೂ ಇನ್ನು ಟಿಪ್ಪು ಜಯಂತಿ ಮಾಡಲು ಆಗುವುದಿಲ್ಲ. ಟಿಪ್ಪು ಜಯಂತಿ ಆಚರಣೆ ಕೈಬಿಟ್ಟಿರುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ನಾವು ನಕರಾತ್ಮಕ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ನಮ್ಮ ಸಂಘಟನೆ ಗಟ್ಟಿಯಾಗಿದೆ. ಇದರ ಆಧಾರದಲ್ಲೇ ರಾಜಕೀಯ ಮಾಡುತ್ತೇವೆ.
ರಾಬಿನ್ ದೇವಯ್ಯ, ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ

ಟಿಪ್ಪು ಜಯಂತಿ ರದ್ದಾಗಿ ನಾಲ್ಕು ವರ್ಷ ಆಗಿದೆ. ಈ ವಿಷಯದಲ್ಲಿ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯವೂ ಮಧ್ಯಪ್ರವೇಶ ಮಾಡಿಲ್ಲ. ಹಾಗಾಗಿ ಟಿಪ್ಪು ಜಯಂತಿ ಆಚರಣೆ ಅಪ್ರಸ್ತುತ ವಿಷಯವಾಗಿದೆ.
ಸಂಕೇತ್ ಪೂವಯ್ಯ, ಕೆಪಿಸಿಸಿ ವಕ್ತಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net