ಶರಣ ಸಾಹಿತ್ಯ ಅಧ್ಯಯನಕ್ಕೆ ತಿಪ್ಪೇರುದ್ರಸ್ವಾಮಿ ಮಾದರಿ : ಡಾ.ಡಿ.ವಿ. ಪರಶಿವಮೂರ್ತಿ

Tipperudraswamy
Published on

ಮೈಸೂರು: ಶರಣ ಸಾಹಿತ್ಯದ ಮೂಲಕ ಶರಣರು ನಾಡಿಗೆ ನೀಡಿದ ಕೊಡುಗೆಗಳನ್ನು ಅಧ್ಯಯನ ಮಾಡುವ ತುರ್ತು ಅಗತ್ಯತೆ ಇದ್ದು, ಶರಣ ಸಾಹಿತ್ಯದ ಅಧ್ಯಯನದ ಮೂಲಕ ಇಂದಿನ ಹೊಸ ಸವಾಲುಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕು. ಈ ದೃಷ್ಟಿಯಲ್ಲಿ ತಿಪ್ಪೇರುದ್ರಸ್ವಾಮಿ ಅವರು ನಮ್ಮ ಮುಂದೆ ದಿಕ್ಸೂಚಿಯಾಗಿ ನಿಲ್ಲುತ್ತಾರೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಶಿವಮೂರ್ತಿ ಹೇಳಿದರು.

ಡಾ.ಎಚ್. ತಿಪ್ಪೇರುದ್ರಸ್ವಾಮಿ ಸಂಸ್ಮರಣ ಸಮಿತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆ, ಸಂವಹನ ಪ್ರಕಾಶನ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎಚ್. ತಿಪ್ಪೇರುದ್ರಸ್ವಾಮಿ ಸಂಸ್ಮರಣೆ ದತ್ತಿ ಉಪನ್ಯಾಸ ಮತ್ತು ಸಂಸ್ಮರಣಾ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಶರಣರ ಸಾಹಿತ್ಯದಲ್ಲಿ ತಿಪ್ಪೇರುದ್ರಸ್ವಾಮಿ ಅವರ ಕೊಡುಗೆ ಅಪಾರವಾದದ್ದು, ಎಲ್ಲರೂ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಆದರೆ, ತಿಪ್ಪೇರುದ್ರಸ್ವಾಮಿ ಶರಣ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಅನೇಕ ಕೃತಿಗಳಲ್ಲಿ ಶರಣ ಸಾಹಿತ್ಯದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ. ತಿಪ್ಪೇರುದ್ರಸ್ವಾಮಿ ತಾವು ರಚಿಸಿದ ಕೃತಿಗಳಲ್ಲಿ ಕೇವಲ ಶರಣರನ್ನು ಹೊಗಳುವುದಿಲ್ಲ, ಬದಲಾಗಿ ಶರಣರ ಕೊಡುಗೆಗಳನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಶರಣರ ಕೊಡುಗೆಯನ್ನು ವಿಮರ್ಶಾತ್ಮಕವಾಗಿ ಮತ್ತೆ ಚರ್ಚಿಸುವ ಅವಶ್ಯಕತೆ ಇದ್ದು, ಇಂತಹ ಒಂದು ಚರ್ಚೆಗೆ ತಿಪ್ಪೇರುದ್ರಸ್ವಾಮಿ ಅವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ನಾಂದಿ ಹಾಡಿದ್ದಾರೆ ಎಂದು ಹೇಳಿದರು.

ಶರಣ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಜಾನಪದ ಸಾಹಿತ್ಯ, ಶಿಷ್ಟ ಸಾಹಿತ್ಯಕ್ಕೆ ತಿಪ್ಪೇರುದ್ರಸ್ವಾಮಿ ನೀಡಿದ ಕೊಡುಗೆ ಅಪಾರವಾದದ್ದು. ಇಂದಿಗೂ ಕೂಡ ಕರ್ನಾಟಕ ಸಂಸ್ಕೃತಿ, ಕರ್ನಾಟಕ ಜಾನಪದ, ಕರ್ನಾಟಕ ಶಾಸನ ಮತ್ತು ಕರ್ನಾಟಕ ವಾಸ್ತುಶಿಲ್ಪದ ಕುರಿತು ಅಧ್ಯಯನ ಮಾಡುವವರು ತಿಪ್ಪೇರುದ್ರಸ್ವಾಮಿ ಅವರ ಕೃತಿಗಳನ್ನು ಆಕಾರ ಗ್ರಂಥವಾಗಿ ಅಧ್ಯಯನ ಮಾಡುತ್ತಾರೆ. ತಿಪ್ಪೇರುದ್ರಸ್ವಾಮಿ ಅವರು ಇಂದು ನಮ್ಮ ಮುಂದೆ ಇಲ್ಲ, ಅವರನ್ನು ನಾವು ಅವರ ಕೃತಿಗಳ ಮೂಲಕ ನೆನಪಿಸಿಕೊಳ್ಳಬೇಕು ಎಂದರು.

ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ತಿಪ್ಪೇರುದ್ರಸ್ವಾಮಿ ಒಂದು ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು. ಅವರ ಸಾಹಿತ್ಯ ರುದ್ರಸತ್ವದಿಂದ ಕೂಡಿದೆ. ‘ನೆನಪಿನ ಬುತ್ತಿ’ ಕೃತಿಯು ತಿಪ್ಪೇರುದ್ರಸ್ವಾಮಿ ಅವರ ಆತ್ಮಕತೆ. ಈ ಕೃತಿ ಸಣ್ಣದಾಗಿದ್ದರೂ ಗಣ್ಯವಾದ ಪುಸ್ತಕವಾಗಿದೆ ಎಂದರು.

ಶರಣರು ಪ್ರತಿಪಾದಿಸಿದ ಮತ್ತು ತಮ್ಮ ಬದುಕಿನಲ್ಲಿ ಸಾಧಿಸಿ ತೋರಿಸಿದ ಸಾರ್ವಕಾಲಿಕ ಮೌಲ್ಯಗಳನ್ನು ಇಂದಿನ ಸಾಮಾಜಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಸಾಹಿತ್ಯವಾಗಿ ಪರಿವರ್ತಿಸಿ ಜನಮನವನ್ನು ಮುಟ್ಟುವ ಕಾದಂಬರಿಗಳನ್ನು ನೀಡಿದ ತೃಪ್ತಿ ನನಗಿದೆ ಎಂಬುದು ತಿಪ್ಪೇರುದ್ರಸ್ವಾಮಿ ಅವರ ಅಭಿಪ್ರಾಯವಾಗಿತ್ತು ಎಂದು ಹೇಳಿದರು.

ಸುತ್ತೂರಿನ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ದಾವಣಗೆರೆಯ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ‌್ಯ ಸ್ವಾಮೀಜಿ, ಸಾಹಿತಿ ಡಾ.ವೀರಣ್ಣ ರಾಜೂರ, ಪ್ರಕಾಶಕ ಡಿ.ಎನ್. ಲೋಕಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಡಾ.ಎಚ್. ತಿಪ್ಪೇರುದ್ರಸ್ವಾಮಿ ಸಂಸ್ಮರಣ ಸಮಿತಿ ಸಂಚಾಲಕಿ ಡಾ.ಎಚ್.ಟಿ.ಶೈಲಜಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net