

ಮಂಡ್ಯ: ಜಿಲ್ಲೆಯಲ್ಲಿ ಗಣಿಗಾರಿಕೆಗೆ ಕಡಿಮೆಯಾದ ಪರಿಣಾಮವೋ ಅಥವಾ ಬೇಡಿಕೆಯಷ್ಟು ಸಾಮಗ್ರಿ ಪೂರೈಕೆಯಾಗುತ್ತಿಲ್ಲದಿರುವ ಪರಿಣಾಮವೋ ರಾಮನಗರ ಹಾಗೂ ಕುಣಿಗಲ್ ಭಾಗದ ಗಣಿ ಮಾಲೀಕರಿಗೆ ಶುಕ್ರದೆಸೆ ನಡೆಯುತ್ತಿದೆ. ನಿಯಮ ಮೀರಿ ಟಿಪ್ಪರ್‌ಗಳಲ್ಲಿ ಓವರ್‌ಲೋಡ್‌ನಲ್ಲಿ ಜಲ್ಲಿಕಲ್ಲು ಹಾಗೂ ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದರೂ ಯಾವುದೇ ಕ್ರಮವಾಗದಿರುವುದು ದುರಂತ.
ಬೇರೆ ಜಿಲ್ಲೆಗಳಿಂದ ಬರುವ ಟಿಪ್ಪರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜತೆಗೆ ನಿಯಮಗಳನ್ನು ಗಾಳಿಗೆ ತೂರುವ ಕೆಲಸವೂ ಮಿತಿ ಮೀರುತ್ತಿದೆ. ಆದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿರುವುದು ಗುಟ್ಟೇನಲ್ಲ. ಸರ್ಕಾರದ ನಿಯಮ ಉಲ್ಲಂಘಿಸಿ ಹತ್ತಾರೂ ಟನ್‌ಗಳ ಲೆಕ್ಕದಲ್ಲಿ ಟಿಪ್ಪರ್‌ಗಳು ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿವೆ.
ಕೋಟ್ಯಂತರ ರೂ ನಷ್ಟ: ಓವರ್‌ಲೋಡ್ ತುಂಬಿಕೊಂಡು ಬರುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ದಿನಕ್ಕೆ ಲಕ್ಷ ರೂನಂತೆ ತಿಂಗಳಿಗೆ ಕೋಟ್ಯಂತರ ರೂ ನಷ್ಟವಾಗುತ್ತಿದೆ. ಆರ್‌ಟಿಒ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ 10 ಚಕ್ರದ ಟಿಪ್ಪರ್ ಗರಿಷ್ಟ 25 ಟನ್ ಹಾಗೂ 6 ಚಕ್ರದ ಟಿಪ್ಪರ್‌ಗೆ ಗರಿಷ್ಟ 16 ಟನ್‌ನಷ್ಟು ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರಲು ಅವಕಾಶವಿದೆ. ಇದಕ್ಕೆ ಇವರು ಪ್ರತಿ ಟಿಪ್ಪರ್‌ಗೆ ಇಂತಿಷ್ಟೆಂದು ಸರ್ಕಾರಕ್ಕೆ ಶುಲ್ಕ ನೀಡುತ್ತಾರೆ.
ಆದರೆ ವಾಸ್ತವವಾಗಿ ಪ್ರತಿದಿನ ನಡೆಯುತ್ತಿರುವುದೇ ಬೇರೆ. 10 ಚಕ್ರದ ಒಂದು ಟಿಪ್ಪರ್ 40 ರಿಂದ 45 ಟನ್‌ನಷ್ಟು ಜಲ್ಲಿಕಲ್ಲು, ಎಂ ಸ್ಯಾಂಡ್ ತುಂಬಿಕೊಂಡು ಬರುತ್ತಿದ್ದಾರೆ. ಅಂತೆಯೇ ಪ್ರತಿದಿನ ಈ ರೀತಿ ಲೆಕ್ಕವಿಲ್ಲದಷ್ಟು ಟಿಪ್ಪರ್‌ಗಳು ರಾಮನಗರ, ಕುಣಿಗಲ್ ಭಾಗದಿಂದ ಮೈಸೂರಿಗೆ ಸಂಚಾರ ಮಾಡುತ್ತಿವೆ. ಈ ಲೆಕ್ಕಾಚಾರದಲ್ಲಿ ಗಮನಿಸಿದರೆ ಕೋಟ್ಯಂತರ ರೂಗಳನ್ನು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇನ್ನು ಓವರ್‌ಲೋಡ್ ಹಾಕಿಕೊಂಡು ಬರಲು ಕಾರಣ ಹಣದ ಲೆಕ್ಕಾಚಾರ. ನಿಯಮದಂತೆ ಟನ್ ಪದಾರ್ಥ ತುಂಬಿಸಿಕೊಂಡು ಬಂದರೆ ಮಾಲೀಕರಿಗೆ ಅಷ್ಟೇನೂ ಲಾಭವಾಗುವುದಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ವಿಷಯ ತಿಳಿದಿದ್ದರೂ ಜಿಲ್ಲೆಯ ಆರ್‌ಟಿಒ, ಪೊಲೀಸ್, ಗಣಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕಿದೆ. ಓವರ್‌ಲೋಡ್ ತುಂಬಿಕೊಂಡು ಬರುವ ವಾಹನಗಳಿಗೆ ದಂಡದ ಬಿಸಿ ತೋರಿಸದಿದ್ದರೆ ಅಕ್ರಮ ಸಾಗಾಣಿಕೆ ಇನ್ನು ರಾಜರೋಷವಾಗಿಯೇ ನಡೆಯುವುದರಲ್ಲಿ ಅನುಮಾನವಿಲ್ಲ.
ಅಧಿಕಾರಿಗಳ ಜಾಣ ಮೌನ: ಬೇರೆ ಜಿಲ್ಲೆಯಿಂದ ಮೈಸೂರಿಗೆ ಹೋಗಲು ಮಂಡ್ಯ ಜಿಲ್ಲೆ ಮಾರ್ಗ ಅವಶ್ಯಕವಾಗಿದೆ. ಟಿಪ್ಪರ್‌ಗಳು ಓವರ್‌ಲೋಡ್ ಹಾಕಿಕೊಂಡು ಬರುತ್ತಿದ್ದರೂ, ಜಿಲ್ಲೆಯ ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ. ಪ್ರತಿದಿನ ಮದ್ದೂರು, ಕೆಸ್ತೂರು, ಕೊಪ್ಪ ಹಾಗೂ ಕೌಡ್ಲೆ ಮಾರ್ಗವಾಗಿ ಓವರ್‌ಲೋಡ್ ಹಾಕಿಕೊಂಡು ಬರುವ ವಾಹನಗಳನ್ನು ನೋಡಿಯೂ ಕಣ್ಮುಚ್ಚಿ ಕುಳಿತಿರುವುದರ ಹಿಂದಿನ ಮರ್ಮವೇನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಾಹಿತಿಗಳ ಪ್ರಕಾರ ಓವರ್‌ಲೋಡ್ ಟಿಪ್ಪರ್‌ಗಳ ಪೈಕಿ ಒಂದಕ್ಕೆ ಐದು ಸಾವಿರ ರೂನಂತೆ ಲಂಚ ಕೊಡಲಾಗುತ್ತಿದೆ ಎನ್ನುವ ಆರೋಪಗಳಿವೆ. ಇದಕ್ಕೆ ಪೂರಕವೆಂಬಂತೆ ಓವರ್‌ಲೋಡ್ ಟಿಪ್ಪರ್‌ಗಳು ರಾಜಾರೋಷವಾಗಿ ತಿರುಗಾಡಿದರೂ ಕ್ರಮವಾಗದಿರುವುದೇ ಸಾಕ್ಷಿ ಎನ್ನಬಹುದು.
ಇನ್ನು ಟಿಪ್ಪರ್‌ಗಳು ಸಂಚರಿಸುವ ಮಾರ್ಗದಲ್ಲಿ ಪ್ರತಿನಿತ್ಯವೂ ಹೈವೈ ಪೊಲೀಸರು ಗಸ್ತು ಇರುತ್ತಾರೆ. ಅವರ ಎದುರೇ ಟಿಪ್ಪರ್‌ಗಳು ಹೋದರೂ ಕ್ರಮ ವಹಿಸದೇ ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ.
ವಾಹನ ಸವಾರರಿಗೆ ಕಿರಿಕಿರಿ: ಓವರ್‌ಲೋಡ್ ತುಂಬಿಕೊಂಡು ಬರುತ್ತಿರುವುದರ ನಡುವೆ ಒಂದೇ ಪರ್ಮಿಟ್‌ನಲ್ಲಿ ಎರಡು ಮೂರು ಟಿಪ್ಪರ್‌ಗಳ ಸಂಚಾರ ನಡೆಯುತ್ತಿದೆಯೇ ಎನ್ನುವ ಗುಮಾನಿಯೂ ಇದೆ. ಇದಕ್ಕೆ ಕಾರಣ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಕೆಲ ಟಿಪ್ಪರ್‌ಗಳಿಗೆ ನಂಬರ್ ಪ್ಲೇಟ್‌ಗಳೇ ಇರುವುದಿಲ್ಲ.
ಮತ್ತೊಂದೆಡೆ ಕೆಲ ಟಿಪ್ಪರ್‌ಗಳು ಜಲ್ಲಿಕಲ್ಲು ಹಾಗೂ ಎಂ ಸ್ಯಾಂಡ್ ತುಂಬಿಕೊಂಡು ಬರುವ ವೇಳೆ ಸರಿಯಾಗಿ ಮುಚ್ಚಿರುವುದಿಲ್ಲ. ಇದರಿಂದ ಮರಳು, ಜಲ್ಲಿ ಕಲ್ಲು ಗಾಳಿಗೆ ತೂರಿಕೊಂಡು ಹಿಂದಕ್ಕೆ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗುತ್ತದೆ. ಇನ್ನೂ ಹಿಂದಿಕ್ಕಿ ಹೋಗಲು ಹರಸಾಹಸ ಪಡುವಂತಹ ಸ್ಥಿತಿ ಇರುತ್ತದೆ. ಮಾತ್ರವಲ್ಲದೆ ಕಾರಿನ ಗ್ಲಾಸ್‌ಗಳಿಗೆ ಕಲ್ಲು ಬಿದ್ದು ಹೊಡೆದು ಹೋಗಿರುವ ಉದಾಹರಣೆಗಳು ಇವೆ. ಮತ್ತೊಂದೆಡೆ ಓವರ್‌ಲೋಡ್ ಹಾಕಿಕೊಂಡು ಕೆಲ ಹಳ್ಳಿ ಮಾರ್ಗದಲ್ಲಿ ಅಥವಾ ಸಣ್ಣ ಪುಟ್ಟ ರಸ್ತೆಯಲ್ಲಿ ಬರುವುದರಿಂದ ಸಂಪೂರ್ಣ ಹಾಳಾಗುತ್ತಿದೆ. ಇದಕ್ಕೆ ಯಾರು ಹೊಣೆ. ಇಷ್ಟಾದರೂ ಏಕೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.