

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಬುಧವಾರ ಬೆಳಗ್ಗಿನ ಜಾವ ಟಿಪ್ಪರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಮೂಲತಃ ಇಚ್ಲಂಪಾಡಿ ನಿವಾಸಿಯಾಗಿದ್ದು ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸಂದೇಶ್ ಥೋಮಸ್ (25) ಮೃತಪಟ್ಟವರು. ಇವರು ಮುಂಜಾವ 4 ಗಂಟೆಗೆ ಸ್ಕೂಟರ್‌ನಲ್ಲಿ ಪಂಪ್‌ವೆಲ್ ಫ್ಲೈಓವರ್ ಕೆಳಗೆ ಬರುತ್ತಿದ್ದಾಗ ಹಳೆ ಕಂಕನಾಡಿ ರಸ್ತೆಯಿಂದ ಪಂಪ್‌ವೆಲ್ ಫ್ಲೈ ಓವರ್ ಕಡೆಗೆ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆಯಿತು. ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಂದೇಶ್ ಥೋಮಸ್ ಅವರು ತನ್ನ ಗೆಳೆಯನನ್ನು ಸ್ಕೂಟರ್‌ನಲ್ಲಿ ಪಂಪ್‌ವೆಲ್ ಫ್ಲೈ ಓವರ್ ಸಮೀಪದ ಟೀ ಅಂಗಡಿಗೆ ಕರೆತಂದು ಬಿಟ್ಟು ಮತ್ತೋರ್ವ ಗೆಳೆಯನನ್ನು ಕರೆ ತರಲು ಹೋಗುತ್ತಿದ್ದರು. ಆಗ ಘಟನೆ ಸಂಭವಿಸಿದೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.