ಮನೆಗಳ ಸಾಲ ಮನ್ನಾ ದೇಶದಲ್ಲೇ ಮೊದಲು,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

vvvvvvvvvvvvvvvvvvvvvvvvvvv
Published on

ಚಿತ್ರದುರ್ಗ: ನಗರ ಆಶ್ರಯ ಯೋಜನೆಯಡಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗಿದ್ದು, ಅದರ ಫಲಾನುಭವಿಗಳ ಸಾಲ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ಕ್ರಮ ದೇಶದಲ್ಲೇ ಮೊದಲು. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಬಿಜೆಪಿ ಕಾರ್ಯಗತಗೊಳಿಸಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ನಗರಸಭೆ, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಿದ್ದ ಕೊಳೆಗೇರಿ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ನಗರ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳ ಸಾಲ ಮನ್ನಾ ಪತ್ರ ವಿತರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದರು.

ಅಜ್ಜ, ಮುತ್ತಜ್ಜರ ಕಾಲದಿಂದಲೂ ನಗರಸಭೆ ವ್ಯಾಪ್ತಿಯ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಅನೇಕರು ವಾಸಿಸುತ್ತಿದ್ದೀರಿ. 9 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ವಿತರಿಸಬೇಕಿದೆ. ಸದ್ಯ 1,800 ಮನೆಗಳ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬುದ್ಧನಗರ ನಿವಾಸಿಗಳಿಗೆ ನೀಡಲಾಗುತ್ತಿದೆ. ನಮಗೆ ಹಕ್ಕು ಪತ್ರ ಸಿಕ್ಕಿಲ್ಲವೆಂದು ಅರ್ಹರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಹಂತ – ಹಂತವಾಗಿ ಎಲ್ಲರಿಗೂ ಮನೆ ಬಾಗಿಲಿಗೆ ಹಕ್ಕು ಪತ್ರ ವಿತರಿಸುವ ಕಾರ್ಯವು ಪಕ್ಷಾತೀತವಾಗಿ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.

ನಗರ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನ ಸೌಲಭ್ಯಕ್ಕಾಗಿ ಹೊಸದಾಗಿ 18 ಸಾವಿರ ಅರ್ಜಿ ಬಂದಿವೆ. ಆದರೆ, ಎಲ್ಲಿಯೂ ಸರ್ಕಾರಿ ಜಾಗ ಇಲ್ಲವಾಗಿದೆ. ಸೂಕ್ತ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಯೋಜನೆಯ ಲಾಭ ಪಡೆದವರು ಪುನಃ ಅರ್ಜಿ ಸಲ್ಲಿಸುವುದು ಸರಿಯಲ್ಲ. ಆದರೂ ಅಧಿಕಾರಿಗಳು ಸರ್ವೆ ನಡೆಸಿದಾಗ ಈ ಸತ್ಯಾಂಶ ಹೊರಬಂದಿದ್ದು, ಅಂತಹ ಅರ್ಜಿ ತಿರಸ್ಕೃತಗೊಂಡಿವೆ. ಆದ್ದರಿಂದ ವಸತಿ ವಂಚಿತರಿಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದರು.

ದೇಶವನ್ನು ಗುಡಿಸಲು ಮುಕ್ತವನ್ನಾಗಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ವಸತಿ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇನ್ನೊಂದು ವರ್ಷದೊಳಗೆ ಕೊಳೆಗೇರಿಗಳಲ್ಲಿ ವಾಸಿಸುವ ಪ್ರತಿ ಮನೆಗೂ ನೇರವಾಗಿ ನಳ ಮತ್ತು ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಮೂರು ದಶಕದ ರಾಜಕೀಯ ಇತಿಹಾಸದಲ್ಲಿ ಚಿತ್ರದುರ್ಗ ನಗರಕ್ಕೆ 18 ಸಾವಿರ ಮನೆ, ಗ್ರಾಮೀಣ ಪ್ರದೇಶಕ್ಕೆ 33 ಸಾವಿರ ಮನೆಗಳನ್ನು ವಿವಿಧ ವಸತಿ ಯೋಜನೆಯಡಿ ಸರ್ಕಾರದ ಮೂಲಕ ನಿರ್ಮಿಸಿ ಅರ್ಹರಿಗೆ ಕೊಡಿಸಿದ್ದೇನೆ. ಈಗಿನ ಬಿಜೆಪಿ ಸರ್ಕಾರ ಕೂಡ ಯೋಜನೆಗಳಿಗೆ ಒತ್ತು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ಕಾರ್ಡ್ ಹೊಂದಿದ ಕಾರ್ಮಿಕರಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ 2 ಲಕ್ಷ ರೂ. ಸಾಲ ದೊರೆಯಲಿದ್ದು, 20 ವರ್ಷ ಬಡ್ಡಿರಹಿತವಾದ ಈ ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಶ್ರೀನಿವಾಸ್, ವೆಂಕಟೇಶ್, ಹರೀಶ್, ನಾಗಮ್ಮ, ಸುರೇಶ್, ತಾರಕೇಶ್ವರಿ, ಶ್ವೇತಾ ವೀರೇಶ್, ಲಕ್ಷ್ಮಮ್ಮ, ಭಾಗ್ಯಮ್ಮ, ಮಾಜಿ ಸದಸ್ಯ ಮಹೇಶ್, ಮುಖಂಡರಾದ ವೀರೇಶ್, ವೆಂಕಟೇಶ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net