

ರಾಯಚೂರು: ಅತಿಯಾದ ಸ್ವಾರ್ಥ ಮನುಷ್ಯ ಜೀವನ ಮತ್ತು ಸಮಾಜವನ್ನು ಹಾಳು ಮಾಡುತ್ತಿದ್ದು, ಮಂತ್ರದಿಂದ ಭಗವಂತ ಒಲಿಯುವುದಿಲ್ಲ. ಭಕ್ತಿಯಿಂದ ನಡೆದುಕೊಂಡಾಗ ಮಾತ್ರ ಒಲಿಯುತ್ತಾನೆ ಎಂದು ತಿಂಥಿಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಾರುತಿ ನಗರದಲ್ಲಿನ ಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನಾಗೋಷ್ಠಿಯಲ್ಲಿ ಮಾತನಾಡಿ, ಬಸವಣ್ಣ ಸೇರಿದಂತೆ ಶರಣರು ಸಮಾಜದ ಸ್ವಾಸ್ಥತೆಗಾಗಿ ಧಾರ್ಮಿಕ ಮತ್ತು ಸಾಮಾಜಿಕ ನಿಯಮಗಳಿಗೆ ಸವಾಲು ಹಾಕಿ ಜೀವನದಲ್ಲಿ ಸಿದ್ಧಿ ಪಡೆದರು ಎಂದರು.
ಅಲ್ಲಮನ ವಚನಗಳು ಶಿವನ ಆರಾಧನೆಗೆ ಒತ್ತು ನೀಡಿದ್ದು, ವೈದಿಕ ಮತ್ತು ಸ್ಥಳೀಯ ಸಂಪ್ರದಾಯಗಳನ್ನು ತಿರಸ್ಕರಿಸಿ, ದೇಹ, ಪ್ರಕೃತಿಯಲ್ಲಿ ಈಶ್ವರನು ಅಡಗಿದ್ದಾನೆ. ಹೀಗಾಗಿ ಸ್ವರ್ಗ ಮತ್ತು ಮುಕ್ತಿ ನಮ್ಮಲ್ಲಿಯೇ ಇವೆ ಎಂದರು.
ಸಾಹಿತಿ ಮಂಡಲಗಿರಿ ಪ್ರಸನ್ನ ಮಾತನಾಡಿ, ಅಲ್ಲಮನ ವಚನಗಳಲ್ಲಿ ತತ್ತ್ವಜ್ಞಾನ, ಅನುಭವ, ವಾಸ್ತವ, ವಿಡಂಬನೆ, ಸಮಾಜದ ಅಂಕು ಡೊಂಕು ತಿದ್ದುವ ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವುದನ್ನು ಕಾಣುತ್ತೇವೆ. ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಅನುಭವ ಮಂಟಪದಲ್ಲಿ ನಡೆಯುತ್ತಿದ್ದರಿಂದ ಅದನ್ನು ಪಾರ್ಲಿಮೆಂಟಿಗೆ ಹೋಲಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಮುಕ್ತ ದೇವದಾಸಿಯರಿಗೆ ಸಿಹಿ ತಂದ ಚಿಕ್ಕಿ: ಸ್ವಾಭಿಮಾನದ ಬದುಕು ನಡೆಸುತ್ತಿರುವ ಮಹಿಳೆಯರು
ವೈದ್ಯ ಅನಿರುದ್ಧ ಕುಲಕರ್ಣಿ ಮಾತನಾಡಿ, ಹುದ್ದೆಗಿಂತ ಶ್ರದ್ಧೆ ಶ್ರೇಷ್ಠವಾಗಿದ್ದು, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಶರಣನಾಗಲು ಸಾಧ್ಯ. ಶರಣರು ಸತ್ತು ಬದುಕಿದ್ದಾರೆ, ನಾವು ಬದುಕಿದ್ದು ಸತ್ತಂತಿದ್ದೇವೆ. ಬದುಕಿರುವಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.