

ಹುಬ್ಬಳ್ಳಿ: ಮುಸ್ಲಿಂರು ಸಹ ಭಾರತದವರು, ಅವರಿಗೂ ದೇಶದ ಸಂಪತ್ತಿನಲ್ಲಿ ಸಮ ಪಾಲಿದೆ, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸರ್ಮಥಿಸಿಕೊಂಡರು.
ನಗರದ ಖಾಸಗಿ ಹೋಟೆಲ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಸ್ಲಿಂರು ಭಾರತದವರು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಹಿಂದುಗಳ ಓಲೈಕೆ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ, ನಾವು ಎಲ್ಲರೂ ಹಿಂದುಗಳೇ. ಹಿಂದುತ್ವ ಬಿಜೆಪಿಯವರ ಮನೆಯ ಆಸ್ತಿಯೇ? ಎಂದೂ ಪ್ರಶ್ನಿಸಿದರು.
ಉತ್ತರ ಕರ್ನಾಟಕದಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆ ಯಾಗಬೇಕು. ಅಭಿವೃದ್ಧಿ ಕೆಲಸ ಮಾಡಲು ಸರ್ಕಾರಕ್ಕೆ ಇಚ್ಛೆ ಇದೆ. ವಿರೋಧ ಪಕ್ಷದವರು ಕೇಳುವ ಪ್ರಶ್ನೆಗೆ ಉತ್ತರಿಸಲು ನಾವು ಸಿದ್ಧವಿದ್ದೇವೆ. ಜನರಿಗೂ ಎಲ್ಲ ವಿಚಾರ ತಿಳಿಸುವುದು ನಮ್ಮ ಉದ್ದೇಶವಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಹಾಳಾಗಬಾರದು ಎಂದು ಅಭಿಪ್ರಾಯಪಟ್ಟರು.
ಕೆಕೆಡಿಬಿ ಮಾದರಿ: ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಮಾದರಿಯಲ್ಲಿ ಕಿತ್ತೂರ ಕರ್ನಾಟಕದಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗಳು ನಡೆಯಬೇಕು.
ಇದಕ್ಕೆ ಸರ್ಕಾರ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಉತ್ತರ ಕರ್ನಾಟಕ ಸಮಸ್ಯೆಗಳು ಚರ್ಚೆಗೆ ಬರಲಿವೆ ಎಂದು ಹೇಳಿದರು.