ಬೇಲೂರು:ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ಮತ್ತು ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದರು. ಕಳೆದ ಮೂರು ತಿಂಗಳ ಹಿಂದೆ ತಿಮ್ಮಕ್ಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ನಂತರ ದತ್ತು ಪುತ್ರ ಬಳ್ಳೂರು ಗ್ರಾಮದ ಉಮೇಶ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಸೆ. 26 ರಂದು ಉಸಿರಾಟದಲ್ಲಿ ಏರು ಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಸೋಮವಾರ ರಾತ್ರಿ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಮಂಗಳವಾರ ಬೆಳಗ್ಗೆ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ತೆರಳಿದರು.ಸಾಲು ಮರದ ತಿಮ್ಮಕ್ಕ ಅವರಿಗೆ ತೀವ್ರವಾದ ಉಸಿರಾಟದ ತೊಂದರೆ ಎದುರಾಗಿದೆ. ಆಂಬುಲೆನ್ಸ್ ವಾಹನ ತುರ್ತಾಗಿ ಅಗತ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಅವರಿಗೆ ಮಂಗಳವಾರ ಬೆಳಗ್ಗೆ 8ಕ್ಕೆ ದೂರವಾಣಿ ಕರೆ ಮಾಡಿ ತಿಳಿಸಲಾಯಿತು. ಅವರು ಸುಮಾರು ಎರಡು ಗಂಟೆ ನಂತರ ಆಂಬುಲೆನ್ಸ್ ಕಳುಹಿಸಿ ಕೊಟ್ಟರು. ಆರೋಗ್ಯಾಧಿಕಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸಿದರು.