

ಹೊನ್ನಾಳಿ: ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಂಗಳವಾರ ತಾಲೂಕು ಸರ್ವೆ ಅಧಿಕಾರಿಗಳು ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿದರು.
ತಾಲೂಕು ಸರ್ವೆ ಅಧಿಕಾರಿ ರಮೇಶ್ ಅವರು, ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರ ಸರ್ವೆ ಮಾಡಿ, ಒತ್ತುವರಿದಾರರಿಂದ ತೆರವುಗೊಳಿಸಿ ಸ್ಮಶಾನಕ್ಕೆ ಜಾಗ ಮೀಸಲಿಟ್ಟರು.
ತಿಮ್ಲಾಪುರ ಗ್ರಾಮದ ಸರ್ವೆ ನಂ. 23 ರಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದ್ದ 2 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವರು ಉಳುಮೆ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸುವಂತೆ ತಾಲೂಕು ಕೆಆರ್ಎಸ್ ಪಕ್ಷದ ಮುಖಂಡರು ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಸ್ವೀಕರಿಸಿದ ಎಸಿ ಅವರು ಸರ್ವೆ ಮಾಡಿ ಜಾಗ ತೆರವುಗೊಳಿಸಿ ಎಂದು ಸರ್ವೆ ಇಲಾಖೆಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲಾಯಿತು.
ತಿಮ್ಲಾಪುರ ಪಿಡಿಒ ಹೊನ್ನಪ್ಪ, ಕುಂದೂರು ರಾಜಸ್ವ ನಿರೀಕ್ಷಕ ಬಸವರಾಜು, ತಾಲೂಕು ಕೆಆರ್ಎಸ್ ಪಕ್ಷದ ಮುಖಂಡರಾದ ಎಚ್.ಎಂ.ಬಸವರಾಜಯ್ಯ, ರೆಹಮಾನ್, ಜಿ.ಮಂಜುನಾಥ್, ಪ್ರಕಾಶ್, ದೇವರಾಜ್, ರಘು, ಸೇವಾಲಾಲ್ ನಗರದ ಗ್ರಾಮಸ್ಥರು ಇದ್ದರು.