ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ

dc office new
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಭಾರತ ಚುನಾವಣಾ ಆಯೋಗ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ವೇಳಾಪಟ್ಟಿ ಪ್ರಕಟಿಸಿದೆ. ಸೆ.30 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ಈ ದಿನದಿಂದ ನ.6 ಮತದಾರರ ಪಟ್ಟಿಯಲ್ಲಿ ನೋಂದಣಿಗಾಗಿ ನಮೂನೆ 19 ರಲ್ಲಿ ಅರ್ಜಿ ಸ್ವೀಕರಿಸಲಾಗುವುದು. 25 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿ.10 ರವರೆಗೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಪಟ್ಟಿಗಳ ಸೇರ್ಪಡೆಗೆ ನ.1ಅರ್ಹತಾ ದಿನಾಂಕವಾಗಿರುತ್ತದೆ.

ಮಾನದಂಡಗಳು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಸಾಮಾನ್ಯ ನಿವಾಸಿ ಆಗಿರಬೇಕು (ಈ ಕ್ಷೇತ್ರದ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ರಾಮನಗರ ಜಿಲ್ಲೆಗಳು ಒಳಗೊಂಡಿರುತ್ತದೆ). ಅರ್ಹತಾ ದಿನಾಂಕ ನ.1 ಕ್ಕಿಂತ ಹಿಂದಿನ 6 ವರ್ಷದ ಅವಧಿಯ ಪೈಕಿ ಕನಿಷ್ಟ 3 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿರಬೇಕು. ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲೆ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿರಬೇಕು. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಖಾಯಂ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಹಾಗೂ ಪಾರ್ಟ್ ಟೈಂ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಲ್ಲಿ ನೋಂದಣಿಗೆ ಅವಕಾಶವಿರುವುದಿಲ್ಲ. ಅರ್ಜಿದಾರರು ಮೇಲೆ ತಿಳಿಸಿರುವ ಅವಧಿಯಲ್ಲಿ ಶಿಕ್ಷಕ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಂದ ದೃಢೀಕೃತ ದಾಖಲೆಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿ ನೊಂದಣಿಗೆ ಅರ್ಜಿದಾರರ ವಾಸಸ್ಥಳವು ಅರ್ಹತೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯ ಸ್ಥಳವು ಪರಿಗಣಿಸಲ್ಪಡುವುದಿಲ್ಲ. ಮತದಾರರ ಪಟ್ಟಿ ಸೇರ್ಪಡೆಗೆ ಕನ್ನಡ ಅಥವಾ ಆಂಗ್ಲ ಭಾಷೆಯ ನಮೂನೆ-19 ರಲ್ಲಿ ಅರ್ಜಿ ಸಲ್ಲಿಸಬಹುದು. ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದರಿಂದ ಅರ್ಜಿದಾರರು ಇತ್ತೀಚಿನ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವ ಬಗ್ಗೆ ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು, ಮತಗಟ್ಟೆ ಸಂಖ್ಯೆ, ಗುರುತಿನ ಚೀಟಿ ವಿವರವನು ಕಡ್ಡಾಯವಾಗಿ ಸಲ್ಲಿಸಬೇಕು.

ಬಲ್ಕ್ ಅರ್ಜಿ ಸಲ್ಲಿಸುವಂತಿಲ್ಲ: ಭರ್ತಿ ಮಾಡಿ ನಮೂನೆ-19ರ ಅರ್ಜಿಯನ್ನು ಪೂರಕ ಪ್ರಮಾಣಪತ್ರಗಳೊಂದಿಗೆ ತಾಲೂಕು ಕಚೇರಿ ಉಪವಿಭಾಗ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೂ ಸಲ್ಲಿಸಬಹುದಾಗಿದೆ. ಆದರೆ ಯಾವುದೇ ವ್ಯಕ್ತಿ ಬಲ್ಕ್ ಆಗಿ ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಆಯಾ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಅರ್ಜಿಗಳನ್ನು ಪಟ್ಟಿಯೊಂದಿಗೆ ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಬೆಂಗಳೂರು ಪದವೀಧರರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಹಾಗೂ ದೊಡ್ಡಬಳ್ಳಾಪುರ ತಹಸೀಲ್ದಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net