

ಶಿವಮೊಗ್ಗ: ತಪಾಸಣೆ ಮತ್ತು ಸಕಾಲಿಕ ಚಿಕಿತ್ಸೆಯಿಂದ ಮಾರಣಾಂತಿಕ ಹೆಪಟೈಟಿಸ್(ಜಾಂಡೀಸ್) ಕಾಯಿಲೆಯನ್ನು ಗುಣಪಡಿಸಬಹುದು ಎಂದು ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣದ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಿಳಿವಳಿಕೆ ಕೊರತೆಯಿಂದ ವಾರ್ಷಿಕವಾಗಿ ವಿಶ್ವದ ಸುಮಾರು 1.34 ಮಿಲಿಯನ್ ಜನ ಹೆಪಟೈಟಿಸ್ ಬಿ ಮತ್ತು ಸಿ ಯಿಂದ ಸಾವನ್ನಪ್ಪುತ್ತಿದ್ದಾರೆ. ಸಾಮಾನ್ಯ ಹಂತದಲ್ಲಿ ಈ ಕಾಯಿಲೆಯ ಗುಣಲಕ್ಷಣಗಳು ಕಂಡುಬರದಿರುವುದು ಇದಕ್ಕೆ ಕಾರಣವಾಗಿದೆ. ಟಿಬಿ, ಎಚ್‌ಐವಿ ಅಥವಾ ಮಲೇರಿಯಾಕ್ಕಿಂತ ವೈರಲ್ ಹೆಪಟೈಟಿಸ್ ಹೆಚ್ಚು ಸಾವು-ನೋವುಗಳನ್ನು ಉಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆರಂಭ ಹಂತದಲ್ಲಿದ್ದ ಈ ಕಾಯಿಲೆಗೆ ಚಿಕಿತ್ಸೆ ಸಕಾಲಿಕವಾಗಿ ದೊರೆಯದಿದ್ದಲ್ಲಿ ಅದು ಉಲ್ಬಣಗೊಂಡು ಸಿರೋಸಿಸ್ ಅಥವಾ ಯಕೃತ್ತಿನ ಕ್ಯಾನ್ಸರ್ ಆಗಿ ಪರಿಣಮಿಸುವ ಸಾಧ್ಯತೆ ಇದೆ. ಕೆಲವು ಸೋಂಕುಗಳು, ಆಲ್ಕೋಹಾಲ್, ಕೆಲವು ಔಷಧಗಳು ಸೇರಿದಂತೆ ವಿಷಕಾರಿ ವಸ್ತುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಸಹ ಹೆಪಟೈಟಿಸ್‌ಗೆ ಕಾರಣವಾಗಿವೆ. ಈ ಕಾಯಿಲೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು ಸಾರ್ವಜನಿಕರು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಕಾಲಿಕವಾಗಿ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ನವಜಾತ ಶಿಶುಗಳಲ್ಲಿ ಉಂಟಾಗುವ ಹೆಪಟೈಟಿಸ್ ಸೋಂಕನ್ನು ನಿಯಂತ್ರಿಸಬಹುದು. ತಾಯಿಯಿಂದ ಮಗುವಿಗೆ ಹರಡುವುದನ್ನು ನಿಲ್ಲಿಸಲು ಎಲ್ಲ ಗರ್ಭಿಣಿಯರು ಹೆಪಟೈಟಿಸ್ ಮತ್ತು ಎಚ್‌ಐವಿಯನ್ನು ಪರೀಕ್ಷಿಸಿಕೊಂಡು ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಪಟೈಟಿಸ್‌ಗೆ ಸಕಾಲಿಕ ಚಿಕಿತ್ಸೆಯೇ ಪರಿಹಾರವಾಗಿದೆ. ಸುರಕ್ಷಿತ ಲೈಂಗಿಕತೆ, ಬಳಸಿದ ಸಿರೇಂಜ್‌ಗಳ ಬಳಸದಿರುವುದು, ವೈಯಕ್ತಿಕ ನೈರ್ಮಲ್ಯ ಅನುಸರಿಸುವುದು, ಸೋಂಕಿತ ವ್ಯಕ್ತಿಯ ವಸ್ತುಗಳ ಬಳಕೆ ಮಾಡದಿರುವುದು ಹೆಪಟೈಟಿಸ್‌ನಿಂದ ದೂರವಿರುವ ಸರಳ ವಿಧಾನ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಅರವಿಂದ್ ಮತ್ತು ಡಾ. ಮುರಳಿ ಅವರು ಹೆಪಟೈಟಿಸ್ ಕಾಯಿಲೆಯ ಸುರಕ್ಷತಾ ಕ್ರಮಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ನಾಗಲೀಕರ್, ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ ನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ದಿನೇಶ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.