

ಸಂಡೂರು: ತಾಯ್ತನ ಸುಖಕರವಾಗಿರಬೇಕೆ ಹೊರತು ಪ್ರಯಾಸಕರವಾಗಿರಬಾರದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಇಂದ್ರಾಣಿ ಹೇಳಿದರು.
ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿಯರ ಆರೋಗ್ಯ ತಪಾಸಣೆ ಶಿಬಿರ ಉದ್ದೇಶಿಸಿ ಬುಧವಾರ ಮಾತನಾಡಿದರು.
ಗರ್ಭಿಣಿಯರು ಸಕಾಲಕ್ಕೆ ವೈದ್ಯಕೀಯ ಪರೀಕ್ಷೆ, ಔಷಧೋಪಚಾರ, ಪೌಷ್ಟಿಕ ಆಹಾರ, ಹಣ್ಣುಗಳ ಸೇವನೆ, ಸರಳ ನಡಿಗೆ, ಸರಳ ಕೆಲಸಗಳಲ್ಲಿ ತೊಡಗಿಕೊಂಡು ಕುಟುಂಬದವರ ಜೊತೆ ಲವಲವಿಕೆಯಿಂದ ಇರಬೇಕು. ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ ಅಡಿ ಆಂಬ್ಯುಲೆನ್ಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ಗರ್ಭಿಣಿಯರಿಗೆ ಶೇಂಗಾ, ಹೆಸರು ಕಾಳು, ಬೆಲ್ಲ ಸೇರಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಒ.ಪಿ.ಜಿಂದಾಲ್ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಗರ್ಭಿಣಿಯರಿಗೆ ತಾಯಿ ಹಾಲಿನ ಮಹತ್ವದ ಕುರಿತು ಕಿರು ನಾಟಕ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.
ಡಾ.ಗೋಪಾಲ್ ರಾವ್, ಡಾ.ಅನುಷಾ, ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪ್ರಿಯದರ್ಶಿನಿ, ವಿದ್ಯಾರ್ಥಿಗಳಾದ ಅಂಬಿಕಾ, ಆಶಾ, ಗೌಶಿಯಾ, ಹಿಮಬಿಂದು, ದೀಪಾ, ಮಧುಶ್ರೀ, ನೇತ್ರಾ, ಶ್ವೇತಾ ಇತರರಿದ್ದರು.