

ಶಿವಮೊಗ್ಗ: ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಅಧಿಕಾರಕ್ಕೆ ಬಂದು ಆರೇಳು ತಿಂಗಳಲ್ಲೇ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದು ಮುಂದಿನ ಲೋಕಸಭೆ ಒಳಗೊಂಡಂತೆ ಎಲ್ಲ ಚುನಾವಣೆಗಳ ದೃಷ್ಟಿಯಿಂದ ಪಕ್ಷದ ಕಾರ್ಯಕ್ರಮಗಳ ಕುರಿತು ಕಾರ್ಯಕರ್ತರು ಇನ್ಮುಂದೆ ತಲೆ ಎತ್ತಿ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ ಕುರಿತ ಜಿಲ್ಲಾಮಟ್ಟದ ಕಾಂಗ್ರೆಸ್ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ.12ರಂದು ಪ್ರಮುಖ ಕಾರ್ಯಕ್ರಮವಾದ ಯುವನಿಧಿ ಯೋಜನೆ ಜಾರಿಗೊಳ್ಳುತ್ತಿದೆ. ನುಡಿದಂತೆ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಕೊಟ್ಟಿದ್ದೇವೆ ಎಂದರು.
ಮಲೆನಾಡಿನಲ್ಲಿ ಕೋಮುವಾದದ ಮೂಲಕ ರಾಜಕಾರಣ ನಡೆಸುವ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಗೆ ಸರಿಯಾದ ಬುದ್ಧಿ ಕಲಿಸಲು ಇದು ಸಕಾಲವಾಗಿದೆ. ಯುವನಿಧಿ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಬಿ.ಕೆ.ಸಂಗಮೇಶ್ವರ, ಬೇಳೂರು ಗೋಪಾಲಕೃಷ್ಣ, ಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥಗೌಡ, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಅನಿತಾ ಕುಮಾರಿ, ಮುಖಂಡರಾದ ಇಸ್ಮಾಯಿಲ್ ಖಾನ್, ಎಂ.ಶ್ರೀಕಾಂತ್, ಬಲ್ಕಿಷ್ ಬಾನು, ಎಸ್.ಕೆ.ಮರಿಯಪ್ಪ, ಕಲೀಂ ಪಾಶಾ, ಪ್ರಮುಖರಾದ ಡಾ. ಶ್ರೀನಿವಾಸ ಕರಿಯಣ್ಣ, ಎನ್.ರಮೇಶ್, ಎಚ್.ಪಿ.ಗಿರೀಶ್, ಸಿ.ಎಸ್.ಚಂದ್ರಭೂಪಾಲ್ ಮತ್ತಿತರರಿದ್ದರು.