ಕಾಲಕಾಲಕ್ಕೆ ಕರವಸೂಲಿ ಮಾಡಿ

16-DVD-2
ದೇವದುರ್ಗದ ತಾಪಂ ಸಭಾಂಗಣದಲ್ಲಿ ತಾಪಂ ಇಒ ಬಸವರಾಜ ಹಟ್ಟಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್ ನಾಯಕ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕಿ ಮಹೇಶ್ವರಿ ಇದ್ದರು.
Published on

ದೇವದುರ್ಗ; ಗ್ರಾಪಂ ಉತ್ತಮ ಆಡಳಿತ ನಡೆಸಲು ಕರ ವಸೂಲಿ ಅನಿವಾರ್ಯ ಎನ್ನುವ ಸತ್ಯ ಜನರಿಗೆ ಅರ್ಥ ಮಾಡಿಸಬೇಕು. ಜಾಗೃತಿ ಮೂಡಿಸಿ ಕಾಲಕಾಲಕ್ಕೆ ಕರವಸೂಲಿ ಮಾಡಬೇಕು ಎಂದು ಪಿಡಿಒಗಳಿಗೆ ತಾಪಂ ಇಒ ಬಸವರಾಜ ಹಟ್ಟಿ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಎಲ್ಲ ಗ್ರಾಪಂನಲ್ಲಿ ಸಿಬ್ಬಂದಿಗೆ ಇ ಹಾಜರಾತಿ ತೆಗೆದುಕೊಂಡು ಸಮಯ ಪಾಲನೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಕಸ ವಿಲೇವಾರಿ ಮಾಡಬೇಕು. ಕಸ ವಿಲೇವಾರಿ ವಾಹನಕ್ಕೆ ವಿಮೆ ಮಾಡಿಸಬೇಕು. ಡಿಜಿಟಲ್ ಲೈಬ್ರರಿ ಒತ್ತು ನೀಡುವ ಜನತೆ, ಉಪ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಮಾಡಲು ಪೇಯಿಂಟ್ ಮಾಡಿಸಬೇಕು ಎಂದು ತಾಕೀತು ಮಾಡಿದರು.

ಎಲ್ಲ ಗ್ರಾಪಂಗಳು ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸಬೇಕು. ಕಾಮಗಾರಿಗಳ ಬಗ್ಗೆ ಅಗತ್ಯ ದಾಖಲೆ ಸಂಗ್ರಹಿಸಬೇಕು. ಕೆಲಸ ಮಾಡುವ ಕೂಲಿಕಾರ್ಮಿಕರ ಹಾಜರಾತಿ ಕಡ್ಡಾಯವಾಗಿದ್ದು ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಎರಡೆರಡು ಸಲ ಹಾಜರಾತಿ ಹಾಕಬೇಕು.

ವಸತಿ ಯೋಜನೆ ಫಲಾನುಭವಿಗಳ ಜಿಪಿಎಸ್ ಹಾಗೂ ಎನ್‌ಎಂಆರ್ ತೆಗೆಯಲು ಸೂಚಿಸಿದರು. ಸ್ವಚ್ಛ ಭಾರತ ಯೋಜನೆಯಡಿ 17ಗ್ರಾಪಂನಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜಾಗ ಹದ್ದುಬಸ್ತು ಮಾಡಿಸಬೇಕು ಎಂದು ತಾಕೀತು ಮಾಡಿದರು. ತಾಪಂ ಸಹಾಯಕ ನಿರ್ದೇಶಕ ಅಣ್ಣರಾವ್ ನಾಯಕ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕಿ ಮಹೇಶ್ವರಿ, ಪಿಡಿಒಗಳಾದ ವೆಂಕಟೇಶ, ಮಹಿಬೂಬ್, ಹನುಮಂತ, ಶಿವಪುತ್ರ, ತಿರುಮಲರೆಡ್ಡಿ, ವೆಂಕೋಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net