

ಪುತ್ತೂರು: ಕರೊನಾ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಹೊಸ ಮಾರ್ಗಸೂಚಿ ಹೊರಡಿಸಿದ್ದು, ನಗರಸಭಾ 31 ವಾರ್ಡ್‌ಗಳನ್ನು ವಿಭಾಗಿಸಿ ಸಮಯ ನಿಗದಿಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಸಮಯಕ್ಕೆ ಮಾತ್ರ ಆಯಾ ಮಾರ್ಡ್‌ನವರು ವಸ್ತುಗಳ ಖರೀದಿಗೆ ಪೇಟೆಗೆ ಬರುವಂತೆ ಮಾಹಿತಿ ನೀಡುವ ನಿಟ್ಟಿನಲ್ಲಿ ವಾರ್ಡ್‌ಗಳ ನಗರಸಭಾ ಸದಸ್ಯರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನಗದಿತ ವಾರ್ಡ್‌ನವರಿಗೆ 2 ಗಂಟೆಗಳ ಅವಕಾಶವನ್ನು ಮಾತ್ರ ನೀಡಲಾಗಿದೆ.
ಬೆಳಗ್ಗೆ 6-8 ಗಂಟೆ ತನಕ ವಾರ್ಡ್ ಸಂಖ್ಯೆ ಕಬಕ 1, ಕಬಕ 2, ಪಡ್ನೂರು 3, ಬನ್ನೂರು 4, 5, 6, ಚಿಕ್ಕಮುಡ್ನೂರು 7, 8, 9. ನಗರಸಭಾ ಸದಸ್ಯರು ಶಿವರಾಮ, ವಸಂತ ಕಾರೆಕ್ಕಾಡು, ಕೆ.ಜೀವಂಧರ್ ಜೈನ್, ಗೌರಿ ಬನ್ನೂರು, ಕೆ.ಾತಿಮತ್ ರೆರಾ, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ, ರೋಬಿನ್ ತಾವ್ರೋ ಜವಾಬ್ದಾರಿ ವಹಿಸಲಿದ್ದಾರೆ.
ವಾರ್ಡ್ ಸಂಖ್ಯೆ ಪುತ್ತೂರು ಕಸಬಾ 10ರಿಂದ 18ರ ತನಕ. ನಗರಸಭಾ ಸದಸ್ಯರಾದ ಪ್ರೇಮ್ ಕುಮಾರ್, ಶಕ್ತಿ ಸಿನ್ಹಾ, ಪದ್ಮನಾಭ ನಾಯ್ಕ, ಪಿ.ಜಿ.ಜಗನ್ನಿವಾಸ್ ರಾವ್, ಪ್ರೇಮಲತಾ ರಾವ್, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್, ಅಶೋಕ್ ಶೆಣೈ, ಯಶೋದಾ ಹರೀಶ್ ಜವಾಬ್ದಾರಿ ವಹಿಸಲಿದ್ದಾರೆ. ವಾರ್ಡ್ ಸಂಖ್ಯೆ ಪುತ್ತೂರು ಕಸಬಾ 19-23, ಕೆಮ್ಮಿಂಜೆ ವಾರ್ಡ್ 24-28 ರ ತನಕ. ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ದೀಕ್ಷಾ ಪೈ, ಇಂದಿರಾ, ಶಶಿಕಲಾ, ಮನೋಹರ್ ಕಲ್ಲಾರೆ, ಬಾಲಚಂದ್ರ, ರೋಹಿಣಿ, ಮಮತಾ ರಂಜನ್, ಬಿ. ಶೈಲಾ ಪೈ, ಇಸುಬು ಜವಾಬ್ದಾರಿ ವಹಿಸಲಿದ್ದಾರೆ.
ಲಘು ಲಾಠಿ ಪ್ರಹಾರ: ಮಂಜಲ್ಪಡ್ಪುವಿನ ಮಂಗಳ ಸ್ಟೋರ್ ಬಳಿ ಅಗತ್ಯ ವಸ್ತುಗಳ ಖರೀದಿ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸದೆ ಖರೀದಿಗೆ ಮುಗಿಬಿದ್ದ ಜನರಿಗೆ ಎಚ್ಚರಿಕೆ ನೀಡಿದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
ಸ್ಪಂದನಾ ಸಹಾಯವಾಣಿ: ಜನರಿಗೆ ಅಗತ್ಯ ವಸ್ತುಗಳಿಗೆ ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ತಾಲೂಕಿನ ಕುಂಬ್ರದಲ್ಲಿ ಸ್ಪಂದನಾ ಸಹಾಯವಾಣಿ ಆರಂಭಿಸಲಾಗಿದೆ. ಗ್ರಾಹಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದಾಗಿದ್ದು, ಕುಂಬ್ರದ ಸಮಾನ ಮನಸ್ಕ ತಂಡ ಈ ನಿಟ್ಟಿನಲ್ಲಿ ಸೇವೆ ಆರಂಭಿಸಿದೆ. ವಸ್ತುಗಳ ಹಣದ ಜತೆಗೆ ಸಾಗಾಟದ ಪೆಟ್ರೋಲ್ ವೆಚ್ಚವನ್ನು ಮಾತ್ರ ನಿಗದಿಪಡಿಸಲಾಗುತ್ತಿದೆ.
ಕ್ಯೂ ನಿಲ್ಲದೆ ಪಡೆಯಿರಿ: ಅನಗತ್ಯ ಕ್ಯೂ ನಿಲ್ಲುವ ಬದಲು ಅಗತ್ಯದ ಔಷಧ ವಿವರ ಹಾಗೂ ಹೆಸರು ವಾಟ್ಸಾಪ್ ಮಾಡಿದಲ್ಲಿ ರೆಡಿ ಮಾಡಿ ಇಡುವ ವ್ಯವಸ್ಥೆಯನ್ನು ನಗರದ ದರ್ಬೆ (ಉಷಾ ಮೆಡಿಕಲ್) ಮಾಲೀಕ ಗಣೇಶ್ ಭಟ್ ಆರಂಭಿಸಿದ್ದಾರೆ. ಜನರ ಗುಂಪಾಗಿ ಆಗಮಿಸದೆ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಕ್ರಮ ಅನುಸರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.