ಬಿಬಿಎಂಪಿ ಪಾರ್ಕ್‌ಗಳ ಸಮಯ ಹಿಂದಿನಂತಿರಲಿ: ಮುಖ್ಯ ಆಯುಕ್ತರಿಗೆ ಎನ್.ಆರ್.ರಮೇಶ್ ಮನವಿ

bbmp park
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನಗಳಲ್ಲಿ ಸಾರ್ವಜನಿಕರ ವಾಯುವಿಹಾರಕ್ಕಾಗಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸಮಯವನ್ನು ನಿಗದಿಪಡಿಸಿರುವುದನ್ನು ಬದಲಿಸಿ, ಹಿಂದಿನಂತೆ ಸೀಮಿತ ಅವಧಿಗೆ ಮರುನಿಗದಿ ಪಡಿಸಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಪ್ರಸ್ತುತ ಹೊಸ ಸಮಯ ಅನುಸರಿಸುತ್ತಿರುವ ಕಾರಣ ಪಾರ್ಕ್‌ಗಳಲ್ಲಿ ಗಿಡಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಮಾಲಿಗಳು ನೀರು ಹಾಯಿಸಲು ಹಾಗೂ ಕಳೆ ಕೀಳುವುದು ಇತ್ಯಾದಿ ಕಾರ್ಯಕ್ಕೆ ಹೆಚ್ಚಿನ ಸಮಯ ಸಿಗದ ಕಾರಣ ಪಾರ್ಕ್‌ಗಳು ಕಳಾಹೀನವಾಗುತ್ತಿದೆ. ಹೀಗಾಗಿ ಹಿಂದಿನಂತೆ ಸಾರ್ವಜನಿಕರಿಗೆ ಭೇಟಿ ಸಮಯವನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆಂದು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ತೊಘಲಕ್ ದರ್ಬಾರನ್ನು ಹೋಲುವ ರೀತಿ ಪಾಲಿಕೆ ಮುಖ್ಯ ಆಯುಕ್ತರ ಆದೇಶ ಹೊರಡಿಸಿದ ಬಳಿಕ ಸುಶಿಕ್ಷಿತರಿಗೆ ಅಸಹ್ಯವೆನ್ನಿಸುವ ಘಟನೆಗಳು, ಕಾನೂನುಬಾಹಿರ ಚಟುವಟಿಕೆಗಳು ಪಾರ್ಕ್‌ಗಳಲ್ಲಿ ನಡೆಯಲು ಆಸ್ಪದ ನೀಡಿದಂತಾಗಿದೆ. ಈ ಕುಕೃತ್ಯವನ್ನು ತಡೆಯಲು ಎಲ್ಲ ಪಾರ್ಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಇದಕ್ಕೆ ನಾಗರಿಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ಮುಖ್ಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net