ವೀರರಾಣಿ ಚೆನ್ನಮ್ಮಾಜಿ ಪುತ್ಥಳಿ ಲೋಕಾರ್ಪಣೆಗೆ ಮುಹೂರ್ತ ನಿಗದಿ; ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ

UMESH KOLAKUR
ಉಮೇಶ ಕೋಳಕೂರ, ವೀರರಾಣಿ ಕಿತ್ತೂರು ಚೆನ್ನಮ್ಮ ಸಮಿತಿ ಅಧ್ಯಕ್ಷ
Published on

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯ ಕೇಂದ್ರ ಬಸ್ ನಿಲ್ದಾಣದ ಎದುರು ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಪುತ್ಥಳಿ ಅನಾವರಣಗೊಳಿಸುವ ನಿಟ್ಟಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಸಮಿತಿ ಕಾರ್ಯೋನ್ಮುಖವಾಗಿದ್ದು, 2025 ಅಕ್ಟೋಬರ್ 23 ರಂದು ಮುಹೂರ್ತ ನಿಗದಿಗೊಳಿಸಲಾಗಿದೆ.

ವೀರರಾಣಿ ಕಿತ್ತೂರು ಚೆನ್ನಮ್ಮ ಸಮಿತಿಯ ಪರಿಶ್ರಮ ಮತ್ತು ಪ್ರಯತ್ನದ ಫಲವಾಗಿ ಈಗಾಗಲೇ ಚೆನ್ನಮ್ಮಾಜಿಯ ಬೃಹತ್ ಪುತ್ಥಳಿ ಸ್ಥಾಪಿಸಿ ಪ್ರತಿಷ್ಟಾಪಿಸಲಾಗಿದೆ. ಹಲವು ತಿಂಗಳುಗಳಿಂದ ಪುತ್ಥಳಿ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಿದ್ದರಿಂದ ಲೋಕಾರ್ಪಣೆ ವಿಳಂಬವಾಗಿದ್ದು, ಇದೀಗ ಲೋಕಾರ್ಪಣೆಗೆ 2025 ಅ. 23 ರಂದು ಮುಹೂರ್ತ ನಿಗದಿಗೊಳಿಸಲಾಗಿದೆ.

ಹಲವು ತಿಂಗಳುಗಳಿಂದ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದವರು ಪುತ್ಥಳಿ ಅನಾವರಣಕ್ಕಾಗಿ ಸಮಿತಿಗೆ ಮನವಿ ಮಾಡಿದ್ದರು. ಅಲ್ಲದೇ, ಪುತ್ಥಳಿ ಅನಾವರಣಗೊಳಿಸಲು ಮಹಾನಗರ ಪಾಲಿಕೆ 25 ಲಕ್ಷ ರೂಪಾಯಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ 25 ಲಕ್ಷ ರೂಪಾಯಿ ಅನುದಾನ ಕೊಡಲು ಮೌಖಿಕವಾಗಿಯೂ ತಿಳಿಸಿದ್ದರು.

ಆದರೆ, ಪುತ್ಥಳಿ ಪ್ರತಿಷ್ಟಾಪನೆ ಮತ್ತು ಲೋಕಾರ್ಪಣೆಗೆ ಎಲ್ಲ ಸಮುದಾಯದವರಿಂದ ಪಡೆದ ವಂತಿಗೆಯಿಂದ ಈಗಾಗಲೇ ಪುತ್ಥಳಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳೂ ಪೂರ್ಣಗೊಂಡಿವೆ. ಚೆನ್ನಮ್ಮಾಜಿಯ ಪುತ್ಥಳಿ ಪ್ರತಿಷ್ಟಾಪನೆ ಮತ್ತು ಲೋಕಾರ್ಪಣೆ ಸ್ವಾಭಿಮಾನದ ಪ್ರತೀಕವಾಗಿದೆ. ಮಾತ್ರವಲ್ಲ ದೇಶಾಭಿಮಾನದ ಸಂಕೇತವಾಗಿದೆ. ಹೀಗಾಗಿ ಯಾವುದೇ ರೀತಿಯ ಸರ್ಕಾರದ ಅನುದಾನದ ಅವಶ್ಯಕತೆ ಇಲ್ಲವೆಂದು ಅಧಿಕಾರಿ ವರ್ಗಕ್ಕೆ ಅತ್ಯಂತ ವಿನಮ್ರವಾಗಿ ತಿಳಿಯಪಡಿಸಲಾಗಿದೆ.

ಅಲ್ಲದೇ, ಕಿತ್ತೂರು ರಾಣಿ ಚೆನ್ನಮ್ಮನವರ ರಾಜ್ಯಮಟ್ಟದ ಜಯಂತಿಯನ್ನು ವಿಜಯಪುರದಲ್ಲಿಯೇ ಹಮ್ಮಿಕೊಳ್ಳಲು ಮುಖ್ಯಮಂತ್ರಿಗೆ ವಿನಂತಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಆಹ್ವಾನ ಕೊಟ್ಟಿದ್ದು, ಜಿಲ್ಲಾಡಳಿತ ಅನುಮತಿ ನೀಡುವುದರೊಂದಿಗೆ ಸಹಾಯ ಮತ್ತು ಸಹಕಾರ ನೀಡಬೇಕೇಂಬುದು ಸಮಿತಿಯ ಆಶಯವಾಗಿದೆ ಎಂದು ಸಮಿತಿಯ ಅಧ್ಯಕ್ಷ ಉಮೇಶ ಕೋಳಕೂರ ಹಾಗೂ ಸಮಿತಿಯ ಎಲ್ಲ ಸದಸ್ಯರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net