

ಬಾಗಲಕೋಟೆ: ನವನಗರ ಠಾಣೆ ವ್ಯಾಪ್ತಿ ರಾತ್ರಿ ಪಹರೆಯಲ್ಲಿದ್ದ ಪೊಲೀಸ್ ಕಾನ್ಸ್‌ಟೆಬಲ್‌ಗಳ ಸಮಯ ಪ್ರಜ್ಞೆಯಿಂದಾಗಿ ನವನಗರದಲ್ಲಿ ನಡೆಯಲಿದ್ದ ಭಾರಿ ದರೋಡೆಯೊಂದು ತಪ್ಪಿದೆ.
ಬುಧವಾರ ರಾತ್ರಿ ನವನಗರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಹಿಡಿದು ಇಬ್ಬರು ಪೊಲೀಸರು ವಿಚಾರಿಸಿದಾಗ ಅವರ ಬಳಿ ಸಿಕ್ಕ ವಸ್ತುಗಳು ಭಯ ಹುಟ್ಟಿಸುವಂತಿದ್ದವು. ಅವರ ಬಳಿ ಒಂದು ತಲವಾರ್, ಒಂದು ಡ್ರಾೃಗರ್, ಖಾರಪುಡಿ, ಹಗ್ಗ, ಕಲ್ಲು ಇದ್ದವು. ಖದೀಮರನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ದರೋಡೆಗೆ ಹೊಂಚು ಹಾಕಿರುವುದನ್ನು ಬಾಯಿಬಿಟ್ಟಿದ್ದಾರೆ. ತಕ್ಷಣವೇ ಪೊಲೀಸ್ ಕಾನ್ಸ್‌ಟೆಬಲ್‌ಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿ ಗೋವಾ ಪಾಸಿಂಗ್ ಬೈಕ್, ಮೊಬೈಲ್‌ಗಳು ಸಹ ಪತ್ತೆ ಆಗಿವೆ. ಖದೀಮರು ರಾತ್ರಿ ಬಾಗಲಕೋಟೆ-ಸೀಮಿಕೇರಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ದರೋಡೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಆರೋಪಿತರಲ್ಲಿ ಒಬ್ಬ ಹಳೇ ಕೇಸ್‌ನಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಒಬ್ಬ 24 ವಯಸ್ಸಿನವನಿದ್ದು, ಉಳಿದ ನಾಲ್ವರು 20 ವಯಸ್ಸಿನ ಆಸುಪಾಸಿನವರಿದ್ದಾರೆ. ಎಲ್ಲರೂ ಬಾಗಲಕೋಟೆಯವರು ಎಂದು ತಿಳಿದು ಬಂದಿದೆ. ಖದೀಮರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಜಯಪ್ರಕಾಶ್ ತಿಳಿಸಿದ್ದಾರೆ.
ಹಾಗೆಯೇ ಬುಧವಾರ ರಾತ್ರಿ ನವನಗರ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೆಬಲ್‌ಗಳಾದ ಬಸವರಾಜ್ ನಾಲತವಾಡ ಹಾಗೂ ಪ್ರಕಾಶ್ ರಾಠೋಡ ಎನ್ನುವವರು ಸಮಯ ಪ್ರಜ್ಞೆ ಮೆರೆದಿದ್ದರಿಂದ ನಗರದಲ್ಲಿ ನಡೆಯಲಿದ್ದ ದರೋಡೆ ತಡೆಯುವಲ್ಲಿ ಸಾಧ್ಯವಾಗಿದೆ.