

ಮುಂಡರಗಿ: ಬಾಲಗಂಗಾಧರ ತಿಲಕ ಅವರು ಸ್ವರಾಜ್ಯವೇ ನಮ್ಮ ಜನ್ಮಸಿದ್ದ ಹಕ್ಕು ಎಂದು ಹೇಳಿ ಅದನ್ನು ನಾನು ಪಡೆದೇ ಪಡೆಯುತ್ತೇನೆ ಎಂದು ಘೋಷಿಸಿದ್ದರು. ಇಂಥವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಡಾ.ಕೆ. ಕೊಟ್ಟೂರಯ್ಯ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಾಲಗಂಗಾಧರ ತಿಲಕ ಅವರ 103ನೇ ಪುಣ್ಯದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ತಿಲಕ ಅವರು ಭಗವದ್ಗೀತೆಯ ಸಾರವನ್ನು ರಚಿಸಿ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ಅದು ದೇವರ ಕಾರ್ಯಕ್ಕೆ ಸಮ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದ ಸ್ಫೂರ್ತಿ ಎಂದರು.
ಪ್ರಾಚಾರ್ಯ ಸಿ.ಎಸ್. ಅರಸನಾಳ ಅಧ್ಯಕ್ಷತೆ ವಹಿಸಿದ್ದರು. ರೇಷ್ಮಾ ಎಂ, ಜೆ.ಶಿವಗಂಗಮ್ಮ, ಎಂ. ಮಂಜುಳಾ ಮತ್ತು ಷರೀಫ್ ಬಳಿಗಾರ ಬಾಲಗಂಗಾಧರ ತಿಲಕರ ಕುರಿತು ಮಾತನಾಡಿದರು. ಪ್ರಾಧ್ಯಾಪಕರಾದ ಶಶಿಕಲಾ ಹಂಚಿನಾಳ, ಎ.ಕೆ. ಮತ್ತೂರಮಠ, ಶ್ರೀಕಾಂತ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಸಂಯೋಜಕ ರಾಜಶೇಖರ ಹುಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಮಲ್ಲನಕೇರಿ ಪ್ರಾರ್ಥಿಸಿದರು. ನಾಗರಾಜ ಸುಗ್ನಳ್ಳಿ ಸ್ವಾಗತಿಸಿದರು. ಜ್ಯೋತಿ ಎಚ್. ನಿರೂಪಿಸಿದರು. ಅಫ್ರೀನ್ ಮಕಾಂದಾರ ವಂದಿಸಿದರು.