

ಬೆಂಗಳೂರು: ಯುವಕರಿಂದ ಹಿಡಿದು ವಯಸ್ಕರನ್ನು ತನ್ನತ್ತ ಸೆಳೆದಿರುವ ವಿಡಿಯೋ ಶೇರಿಂಗ್ ಆ್ಯಪ್ ಟಿಕ್ಟಾಕ್ ಇದೀಗ ಬೆಂಗಳೂರು ಪೊಲೀಸರ ಗಮನವನ್ನು ಸೆಳೆದಿದೆ.
ಹೌದು, ಜನಪ್ರಿಯ ಟಿಕ್ಟಾಕ್ ಆ್ಯಪ್ಗೆ ಬೆಂಗಳೂರು ನಗರ ಪೊಲೀಸರು ಪ್ರವೇಶ ನೀಡಿದ್ದಾರೆ. ಪರಿಣಾಮಕಾರಿಯಾಗಿ ಸಾರ್ವಜನಿಕರನ್ನು ತಲುಪಲು ಈ ನಿರ್ಧಾರ ಮಾಡಿದ್ದು, ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಟಿಕ್ಟಾಕ್ ಖಾತೆ ತೆರೆಯಲಾಗಿದೆ.
ವಿಶೇವೆಂದರೆ ದೇಶದಲ್ಲಿ ಮೊದಲ ಬಾರಿಗೆ ಟಿಕ್ಟಾಕ್ ಖಾತೆ ತೆರೆದ ಕೀರ್ತಿಗೆ ಬೆಂಗಳೂರು ಪೊಲೀಸರು ಭಾಜನರಾಗಿದ್ದಾರೆ. ತಮ್ಮ ವತಿಯಿಂದ ಯಾವುದಾದರೂ ಜನಪರ ಕಾರ್ಯಕ್ರಮ ನಡೆದರೆ, ಅದನ್ನು ಟಿಕ್ಟಾಕ್ ಖಾತೆಗೆ ಅಪ್ಲೋಡ್ ಮಾಡಿ, ಈ ಮೂಲಕ ಜನರನ್ನು ತಲುಪುವ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಸದ್ಯ ಖಾತೆಯಲ್ಲಿ ಬೆಂಗಳೂರು ಪೊಲೀಸರು ಮೂರು ವಿಡಿಯೋಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇರುವ ಮಾರ್ಗಗಳನ್ನು ಬೆಂಗಳೂರು ಪೊಲೀಸರು ಅನುಸರಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ಭಾರತದಲ್ಲಿ ಟಿಕ್ಟಾಕ್ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಟಿಕ್ಟಾಕ್ ಬಳಸುತ್ತಿದ್ದಾರೆ. ಹೀಗಾಗಿ ಯುವ ಸಮುದಾಯ ತಲುಪಲು ಇದೊಂದು ಪರಿಣಾಮಕಾರಿ ಮಾರ್ಗವಾಗಿದೆ. (ದಿಗ್ವಿಜಯ ನ್ಯೂಸ್)