

ಮೂಡಿಗೆರೆ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ಘಟನೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜನರು, ಜಿಲ್ಲಾಡಳಿತ ಎಚ್ಚೆತ್ತು ಜಾಗರೂಕರಾಗಬೇಕು. ಸರ್ಕಾರ ಮಲೆನಾಡು ಭಾಗದಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರಬೇಕು. ಕಾಫಿ ಬೆಳೆಗಾರರು ಸಾರ್ವಜನಿಕ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ಗಿರಿ ಶ್ರೇಣಿಗಳ ಕಾಫಿ ತೋಟಗಳ ಸ್ವರೂಪ ಬದಲಾಗುವುದನ್ನು ತಡೆಯಬೇಕು. ರೆಸಾರ್ಟ್, ಹೋಂಸ್ಟೇಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಒತ್ತಾಯಿಸಿದರು.
ಚಿಕ್ಕಮಗಳೂರು ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತವಾಗಿದೆ. ಪ್ರಾಕೃತಿಕ ಸೌಂದರ್ಯ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ಎಲ್ಲೆಂದರಲ್ಲಿ ಹೋಂಸ್ಟೇ, ರೆಸಾರ್ಟ್‌ಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಇವುಗಳಿಗಾಗಿ ಬೆಟ್ಟ, ಗುಡ್ಡಗಳನ್ನು ಬಗೆದು ರಸ್ತೆ ಮಾಡಲಾಗಿದೆ. ಜೆಸಿಬಿ ಮತ್ತು ಹಿಟಾಚಿಯಿಂದ ಬೆಟ್ಟ, ಗುಡ್ಡಗಳನ್ನು ಸಮತಟ್ಟು ಮಾಡಿ ಹೋಂಸ್ಟೇ ಮತ್ತು ರೆಸಾರ್ಟ್ ನಿರ್ಮಿಸಲಾಗುತ್ತದೆ. ಇದರಿಂದ ನಿಸರ್ಗದ ಸ್ವರೂಪ ಬದಲಾವಣೆಯಾಗುತ್ತಿದೆ. ನೈಸರ್ಗಿಕವಾಗಿ ಹರಿಯುವ ನೀರಿನ ಮೂಲಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಈ ದೌರ್ಜನ್ಯದಿಂದ ಮುಂದೊಂದು ದಿನ ಘೋರ ದುರಂತ ಸಂಭವಿಸಬಹುದು ಎಂದು ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಮೂರು ದಶಕದ ಹಿಂದೆ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿತ್ತು. ಈಗ ಸಂಭವಿಸುತ್ತಿರುವ ಭೂಕುಸಿತದಂತಹ ಘಟನೆಗಳು ಆಗ ನಡೆದಿಲ್ಲ. ಈಗ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗದ ಮೇಲಿನ ದೌರ್ಜನ್ಯ ನಡೆಯುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟ, ಗುಡ್ಡಗಳ ಸ್ವರೂಪಕ್ಕೆ ಧಕ್ಕೆ ತಂದು ವಿಕೃತಿ ಮೆರೆಯುತ್ತಿರುವುದರಿಂದ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಿದೆ. ಸರ್ಕಾರ ಕಠಿಣ ಕ್ರಮಕೈಗೊಂಡರೆ ಮಾತ್ರ ಪ್ರಾಕೃತಿಕ ವಿಕೋಪ ತಡೆಯಲು ಸಾಧ್ಯ. ಇಲ್ಲದಿದ್ದರೆ ಜಿಲ್ಲೆಯಲ್ಲೂ ಕೇರಳದ ವಯನಾಡಿನಲ್ಲಿ ಸಂಭವಿಸದ ರೀತಿಯಲ್ಲೇ ಭೂಕುಸಿತವಾಗಬಹುದು ಎಂದು ಹೇಳಿದರು.