

ಆಲಮಟ್ಟಿ: ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯ ನಂತರ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯ ಮೇರೆಗೆ ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಪ್ರಮುಖ ದೇವಸ್ಥಾನ, ಅಣೆಕಟ್ಟು, ಐತಿಹಾಸಿಕ ಸ್ಥಳಗಳ ಮೇಲೆ ಉಗ್ರರು ಕಣ್ಣು ಹಾಕುತ್ತಿದ್ದಾರೆಂಬ ಸೂಚನೆಯಂತೆ ದೇಶದಲ್ಲಿಯೇ ಎರಡನೇ ದೊಡ್ಡ ಜಲಾಶಯವಾದ ಲಾಲ್ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟೆಗೆ ಮುಂಜಾಗೃತಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಆಲಮಟ್ಟಿಯ ಉದ್ಯಾನವನಗಳಿಗೆ ಹಾಗೂ ಸಮೀಪದ ದೇವಸ್ಥಾನಗಳಿಗೆ ಪೊಲೀಸರು ಸರ್ಪಗಾವಲಿಟ್ಟಿದ್ದು, ಜಲಾಶಯದ 1.5ಕಿ.ಮೀ ವ್ಯಾಪ್ತಿ ಹಾಗೂ ಜಲಾಶಯದ ಎರಡೂ ಬದಿಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾಪಡೆಯ ಸಹಾಯಕ ಕಮಾಂಡೆಂಟ್ ಅರುಣ ಡಿ.ವಿ. ಅವರ ನೇತೃತ್ವದಲ್ಲಿ 85 ಜನ ಸಿಬ್ಬಂದಿ ವಿಶೇಷ ತರಬೇತಿ ಹೊಂದಿದ ಮತ್ತು ಶಸ್ತ್ರಾಸ್ತ್ರಗಳ ಸಮೇತ ದಿನಕ್ಕೆ ಮೂರು ಪಾಳೆಯದಲ್ಲಿ ಜಲಾಶಯದ ಭದ್ರತೆ ಒದಗಿಸಿದ್ದಾರೆ.
36 ಗುಪ್ತ ಕ್ಯಾಮರಾ: ಜಲಾಶಯದ ಹಲವಾರು ಭಾಗಗಳಲ್ಲಿ ಗುಪ್ತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ತಾಸಿಗೊಮ್ಮೆ ಅವಳಿ ಜಿಲ್ಲೆಯ ಎಸ್ಪಿಗಳಿಗೆ ಮಾಹಿತಿ ಕಳುಹಿಸಲಾಗುತ್ತಿದೆ. ಜಲಾಶಯದ ಪ್ರತಿಯೊಂದು ಗೇಟ್ಗಳು ಸೇರಿದಂತೆ ಎಡ&ಬಲಗಳಲ್ಲಿ ತಲಾ ಎರಡು ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಉಗ್ರರ ಕಣ್ಣು ಜಲಾಶಯದ ಮೇಲೆ ಬಿದ್ದಿರುವ ಯಾವುದೇ ಮಾಹಿತಿ ಇಲ್ಲ. ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾಪಡೆಯ ಸಿಬ್ಬಂದಿ ಅವಳಿ ಜಿಲ್ಲೆಯ ಪೊಲೀಸರು ಹೈಅರ್ಲಟ್ ಆಗಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಿಯ ಪೊಲೀಸ್ ಸಿಬ್ಬಂದಿ ಗಸ್ತು ಹಾಕುತ್ತಿದ್ದಾರೆ ಎಂದು ಕೆಬಿಜೆನ್ನೆಎಲ್ ಮುಖ್ಯ ಅಭಿಯಂತರ ಡಿ.ಬಸವರಾಜ ಹೇಳಿದರು.
ನಮ್ಮಲ್ಲಿ ನಾಲ್ಕು ಚಕ್ ಪೊಸ್ಟ್ಗಳಿದ್ದು, ಅಲ್ಲಿ ಸರ್ಕಾರಿ ವಾಹನಗಳು ಸೇರಿದಂತೆ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.