

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಭಯ ಸೃಷ್ಟಿಸಿರುವ ನರಹಂತಕ ಹುಲಿ ಹತ್ಯೆಗೆ ಆಗ್ರಹಿಸಿ ಹೋರಾಟ ತೀವ್ರಗೊಳಿಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಕರೆ ನೀಡಿದ್ದ ಪೊನ್ನಂಪೇಟೆ ತಾಲೂಕು ಬಂದ್ ಗುರುವಾರ ಯಶಸ್ವಿಯಾಗಿ ನಡೆಯಿತು.
ಮೂರು ದಿನ ರಸ್ತೆತಡೆ ಪ್ರತಿಭಟನೆ ಬಳಿಕ 4ನೇ ದಿನ ಪೊನ್ನಂಪೇಟೆ ತಾಲೂಕು ಬಂದ್ಗೆ ಕರೆ ನೀಡಲಾಗಿತ್ತು. ಬೆಳಗ್ಗೆ 6 ಗಂಟೆಯಂದ ಮಧ್ಯಾಹ್ನ 12 ಗಂಟೆಯವರೆಗೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳು ಬಂದ್ ಆಗಿತ್ತು. ಪೊನ್ನಂಪೇಟೆ, ಗೋಣಿಕೊಪ್ಪ, ಬಾಳಲೆ, ಕಾನೂರು, ಶ್ರೀಮಂಗಲ, ಕುಟ್ಟ, ಟಿ.ಶೆಟ್ಟಿಗೇರಿ, ಬಿರುನಾಣಿ ಸೇರಿದ್ದಂತೆ ಬಹುತೇಕ ಗ್ರಾಮಗಳು ಬಂದ್ ಆಗಿತ್ತು.
ತಾಲೂಕು ವ್ಯಾಪ್ತಿಯ ವರ್ತಕರು ಬಂದ್ ಕರೆಗೆ ಸಕಾರತ್ಮಕವಾಗಿ ಸ್ಪಂದಿಸಿದ್ದು, ಅಂಗಡಿ, ಮುಂಗಟ್ಟು ಮುಚ್ಚಿದ್ದರು. ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಹುಲಿ ಭಯದಿಂದ ಮನೆಯಿಂದ ಹೊರ ಬರಲು ಜನ ಹಿಂಜರಿಯುತ್ತಿದ್ದು, ಬಂದ್ ಸಫಲತೆ ಜನತೆ ಎದುರಿಸುತ್ತಿರುವ ಆತಂಕವನ್ನು ಸೂಚಿಸುತ್ತದೆ.
ಶಿವರಾತ್ರಿ ಹಬ್ಬದ ಸಂಭ್ರಮದ ನಡುವೆಯೂ ಸಾರ್ಜನಿಕರು ನರಹಂತಕ ಹುಲಿ ಹತ್ಯೆಗೆ ಸಾಮೂಹಿಕವಾಗಿ ಆಗ್ರಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಶೋಧಾ ಕಾರ್ಯ ಮುಂದುವರಿಸಿದ್ದರೂ, ನರಹಂತಕ ಹುಲಿ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.