

ಮಡಿಕೇರಿ: ದಕ್ಷಿಣ ಕೊಡಗಿನ ಜನರನ್ನು ಭಯಭೀತರನ್ನಾಗಿಸಿರುವ ನರಹಂತಕ ಹುಲಿ ಕೊಂದು ಮೃತದೇಹ ಹಾಜರ್ ಪಡಿಸುವಂತೆ ಒತ್ತಾಯಿಸಿ ಮೂರನೇ ದಿನವಾದ ಬುಧವಾರವೂ ಪ್ರತಿಭಟನೆ ನಡೆಯಿತು.
ಪೊನ್ನಂಪೇಟೆಯ ಕಾನೂರು ಜಂಕ್ಷನ್ ನಿಂದ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಗೋಡಿನವರೆಗೂ ವಾಹನ ಜಾಥಾ ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ವಾಹನದಲ್ಲಿ ಪ್ರತಿಭಟನಾಕಾರರು ವಾಹನ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಯುಕೋ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೋಟಾರ್ ಬೈಕ್, ಕಾರು, ಜೀಪುಗಳಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಅರಣ್ಯಾಧಿಕಾರಿಗಳು, ಜಿಲ್ಲಾಡಳಿತ, ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.
ಪೊನ್ನಂಪೇಟೆ, ಗೋಣಿಕೊಪ್ಪದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದರು. ಮೈಸೂರಿಗೆ ತೆರಳುವ ಮತ್ತಿಗೋಡಿನಲ್ಲಿ ರಸ್ತೆತಡೆ ಮಾಡುವುದರ ಮೂಲಕ ಸಂಚಾರಕ್ಕೆ ತಡೆವೊಡ್ಡಿದ್ದರು. ತಕ್ಷಣ ನರಹಂತಕ ಹುಲ್ಲಿ ಕೊಲ್ಲದಿದ್ದಲ್ಲಿ ಹೋರಾಟದ ಸ್ವರೂಪ ತೀವ್ರಗೊಳಿಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.