

ಮೂಡಿಗೆರೆ: ಗೋಣಿಬೀಡು ಸಮೀಪದ ಕೆಲ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು 4 ಹಸುವಿನ ಕರುಗಳನ್ನು ಪರಚಿ ಗಾಯಗೊಳಿಸಿದೆ.
ದೇವನಾರಿ ಕಾಫಿ ಎಸ್ಟೇಟ್, ಕಲ್ಲುಗುಡ್ಡ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4 ದಿನದಿಂದ ಹುಲಿ ಸಂಚಾರ ಕಂಡುಬಂದಿದೆ. ಶನಿವಾರ ರಾತ್ರಿ ಕಾರ್ಬೈಲ್ ಮತ್ತು ನಂದಿಪುರ ಗ್ರಾಮದತ್ತ ತೆರಳಿದೆ. ಹುಲಿ ಸಂಚರಿಸುತ್ತಿರುವ ವ್ಯಾಪ್ತಿಯನ್ನು ಗುರುತಿಸಲು ಅಲ್ಲಲ್ಲಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಕಾಣಿಸಿಕೊಂಡ ಗ್ರಾಮಗಳಲ್ಲಿ ಕಾಫಿ ತೋಟ ಮತ್ತು ಭತ್ತದ ಗದ್ದೆಯಲ್ಲಿ ಕೆಲಸಕ್ಕೆ ರಜೆ ನೀಡಲಾಗಿದೆ. ರೈತರು ಮತ್ತು ಕಾರ್ಮಿಕರು ತೋಟದತ್ತ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಿಲ್ಲ. ವಾಹನ ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ವಾಹನದಲ್ಲಿ ಪ್ರಚಾರ ನಡೆಸಲಾಗಿದೆ.
ಜುಲೈನಲ್ಲಿ ಗೋಣಿಬೀಡು, ಜಿ.ಹೊಸಳ್ಳಿ, ಆನೆದಿಬ್ಬ, ಕಸ್ಕೆಬೈಲ್, ಕಲ್ಲುಗುಡ್ಡ, ಕಮ್ಮರಗೋಡು, ಹಳಸೆ, ಮಾಕೋನಹಳ್ಳಿ, ನಂದಿಪುರ, ಕಾರ್ಬೈಲ್ ಗ್ರಾಮಗಳಲ್ಲಿ 19 ಕಾಡಾನೆಗಳ ಹಿಂಡು ಸಂಚರಿಸಿ ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಕೆ, ಭತ್ತದ ಬೆಳೆ ನಾಶಪಡಿಸಿತ್ತು. ಇದರ ಬೆನ್ನಲ್ಲೆ ಈಗ ಹುಲಿ ಪ್ರತ್ಯಕ್ಷವಾಗಿರುವುದರಿಂದ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಹಿಡಿಯಬೇಕೆಂದು ಗೋಣಿಬೀಡು ಗ್ರಾಪಂ ಸದಸ್ಯೆ ಜುಬೇದಾ ಒತ್ತಾಯಿಸಿದ್ದಾರೆ.
ಕಲ್ಲುಗುಡ್ಡ ಗ್ರಾಮ ಮತ್ತು ದೇವನಾರಿ ಎಸ್ಟೇಟ್‌ನಲ್ಲಿ ಹುಲಿ ತಿರುಗಾಡಿರುವುದು ಕಂಡುಬಂದಿದೆ. 3 ಕರುಗಳನ್ನು ಪರಚಿ ಗಾಯಗೊಳಿಸಿದೆ. ಹುಲಿ ತಿರುಗಾಡಿರುವ ಸ್ಥಳದಲ್ಲಿ ತೀವ್ರ ಕಾರ್ಯಚರಣೆ ನಡೆಸಲಾಗಿದೆ. ಎಲ್ಲ ಗ್ರಾಮಗಳಲ್ಲೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಲಿ ಸಂಚರಿಸುವುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಲಾಗಿದೆ. ಬೇರೆ ಜಿಲ್ಲೆಯಿಂದ ಕಾನಳ್ಳಿ ಅರಣ್ಯದ ಮೂಲಕ ಬಂದಿರುವ ಶಂಕೆಯಿದೆ. ಬಂದ ದಾರಿಯಲ್ಲಿ ವಾಪಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಹುಲಿ ಚಿಕ್ಕಮಗಳೂರು ಜಿಲ್ಲೆ ದಾಟಿ ಹೋಗಿದ್ದರೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮೂಡಿಗೆರೆ ಆರ್‌ಎಫ್‌ಒ ಚರಣ್ ತಿಳಿಸಿದ್ದಾರೆ.