

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ ಪಾಳ್ಯ ಸಫಾರಿಯಲ್ಲಿ ಭಾನುವಾರ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದ್ದು, ಉತ್ಸುಕತೆಯನ್ನು ಹೆಚ್ಚಿಸಿದೆ.
ಪಿ.ಜಿ ಪಾಳ್ಯ ವನ್ಯಜೀವಿ ವಲಯವು ಸಮೃದ್ಧಿಯಿಂದ ಕೂಡಿದ್ದು, ಇಲ್ಲಿ ಆನೆ. ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕರಡಿ, ನರಿ ಹಾಗೂ ಇನ್ನಿತರೆ ಪ್ರಾಣಿಗಳಿವೆ. ಆದರೆ ಪ್ರವಾಸಿಗರು ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳನ್ನು ವೀಕ್ಷಿಸಲು ಅವಕಾಶ ಇರಲಿಲ್ಲ. ಇದನ್ನು ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು 2023, ಡಿ. 2 ರಂದು ಲೊಕ್ಕನಹಳ್ಳಿ ಮೂಲಕ ಸಫಾರಿಯನ್ನು ಆರಂಭಿಸಿತ್ತು. ಜತೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2024, ಅ.2 ರಿಂದ ಉಡುತೊರೆ ಜಲಾಶಯ ಅರಣ್ಯ ಪ್ರದೇಶದ ಕಡೆಯಿಂದ ತೆರಳಲು ಅಜ್ಜೀಪುರದಲ್ಲಿ ಆರಂಭಿಸಲಾಗಿದೆ.
ಈಗಾಗಲೇ ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೆರಳಿದ್ದು, ಜಿಂಕೆ, ಆನೆ, ಕಾಡೆಮ್ಮೆ, ಕಡವೆ, ನರಿ, ಉಢ ಹಾಗೂ ಇನ್ನಿತರೆ ಪ್ರಾಣಿಗಳು ಹೆಚ್ಚು ಬಾರಿ ದರ್ಶನವಾಗಿದೆ. ಆದರೆ ಹುಲಿಯ ದರ್ಶನವಾಗಬೇಕಾದರೆ ಹೆಚ್ಚು ಸಮಯವಾಗುತ್ತಿತ್ತು. ಭಾನುವಾರ ಸಂಜೆ ತೆರಳಿದ್ದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದ್ದು, ಸಫಾರಿ ಮಾರ್ಗದ ಸಮೀಪದಲ್ಲೇ ಗಾಂಭೀರ್ಯದಿಂದ ನಡೆದು ಹೋಗುತ್ತಿದ್ದ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದ ತೆರಳುವ ಪ್ರವಾಸಿಗರಲ್ಲಿ ಕುತೂಹಲ ಹಾಗೂ ಉತ್ಸುಕತೆಯನ್ನು ಹೆಚ್ಚಿಸಿದೆ.
ಸಫಾರಿಗೆ ತೆರಳಲು ಬೆಳಗ್ಗೆ 6 ರಿಂದ 9ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ಸಮಯ ನಿಗದಿಪಡಿಸಲಾಗಿದೆ. ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 200 ರೂ. ಶುಲ್ಕವನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ.