

ಸರಗೂರು: ತಾಲೂಕಿನ ನುಗು ಜಲಾಶಯದ ಹಿನ್ನೀರು ಬಳಿ ಇರುವ ಹೊಸ ಬಿರ್ವಾಳ್ ವಲಯದ ಅರಣ್ಯ ವ್ಯಾಪ್ತಿಯ ಹೊಸಹೆಗ್ಗುಡಿಲು ಗ್ರಾಮದಲ್ಲಿ ಶನಿವಾರ ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡು ಆತಂಕ ನಿರ್ಮಿಸಿರುವ ಬೆನ್ನಲ್ಲೇ ಅದೇ ಗ್ರಾಮದ ಮತ್ತೊಂದು ಜಮೀನಿನಲ್ಲೂ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಹೆಡಿಯಾಲ ಮಾರ್ಗವಾಗಿ ಸರಗೂರು ತಾಲೂಕಿನ ಮಧ್ಯೆ ರಸ್ತೆಯ ಬದಿಯಲ್ಲಿ ಇರುವ ಹೊಸಹೆಗ್ಗುಡಿಲು ಗ್ರಾಮದ ಸಿದ್ದರಾಜು ಎಂಬುವರ ಜಮೀನಲ್ಲಿ ಬಿರ್ವಾಳ್ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷವಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಜಮೀನಲ್ಲಿ ಕಾವಲು ಕಾಯುವ ಸಮಯದಲ್ಲಿ ರೈತರೊಬ್ಬರ ಕಣ್ಣಿಗೆ ಅನತಿ ದೂರದಲ್ಲಿ ಹುಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸಿದೆ.
ಹೊಸಹೆಗ್ಗುಡಿಲು ಸೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಜನರು ಮನೆಯಿಂದ ಹೊರಬರಲು ಹಾಗೂ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ 2-3 ಬಾರಿ ಹುಲಿ ಕಾಣಿಸಿದ್ದು, ಅರಣ್ಯ ಇಲಾಖೆ ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹುಲಿ ಹೆಜ್ಜೆ ಕಾಣಿಸಿಕೊಂಡ ಬೆನ್ನಲ್ಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಗ್ರಾಮಕ್ಕೆ ಬಂದು ಹುಲಿ ಹೆಜ್ಜೆ ಗುರುತು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಹುಲಿ ಓಡಾಡುವ ಜಾಗದಲ್ಲಿ ಬೋನು ಇರಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.