

ವಿರಾಜಪೇಟೆ: ಪಟ್ಟಣದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಮಗ್ಗುಲ ಹಾಗೂ ಐಮಂಗಲ ಗ್ರಾಮದಲ್ಲಿ ಇತ್ತೀಚೆಗೆ ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶುಕ್ರವಾರ ಬೆಳ್ಳಂಬೆಳಗ್ಗೆ ವ್ಯಾಘ್ರನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ.
ನ.3 ರಂದು ಮಗ್ಗುಲ ಗ್ರಾಮದ ವೇಗಾನಂದ ಹಾಗೂ ವಿ.ಎಸ್.ಪ್ರೀತಮ್ ಅವರ ತೋಟದ ಬಳಿ ಹುಲಿ ನಿಂತಿರುವುದನ್ನು ಗಮನಿಸಿದ ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ ತೆರಳಿದ್ದರು. ಅದಾದ ಮಾರನೇ ದಿನ ಐಮಂಗಲ ಗ್ರಾಮದ ಪ್ರಕಾಶ್ ಅವರ ತೋಟದಲ್ಲಿ ಹುಲಿ ಹೆಜ್ಜೆ ಪತ್ತೆ ಆದವು. ಅಲ್ಲದೆ ಅವರ ತೋಟದಿಂದ ಹುಲಿ ಘರ್ಜಿಸುವ ಸದ್ದು ಕೇಳಿ ಗ್ರಾಮಸ್ಥರನ್ನು ಮತ್ತಷ್ಟು ಭಯಪಡಿಸಿತ್ತು.
ಕೂಡಲೇ ಈ ವಿಚಾರವನ್ನು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರ ಗಮನಕ್ಕೆ ತರಲಾಗಿ ಅವರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಶುಕ್ರವಾರ ಬೆಳಗ್ಗೆ ಆರು ಗಂಟೆಗೆ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಿದರು.
ಮಗ್ಗುಲ ಹಾಗೂ ಐಮಂಗಲ ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆಯಾದ ತೋಟ ಹಾಗೂ ಅದರ ಸುತ್ತಮುತ್ತ ಬೆಟ್ಟದಲ್ಲಿ ಕೊಡಗು ಜಿಲ್ಲಾ ಡಿಸಿಎಫ್ ಜಗನ್ನಾಥ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಲಾಯಿತು. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ಖುದ್ದು ಡಿಸಿಎಫ್ ಜಗನ್ನಾಥ್ ಅವರು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಕಾಡು ಹಾಗೂ ತೋಟಗಳಲ್ಲಿ ಹುಲಿ ಇರುವಿಕೆ ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಫ್ ಜಗನ್ನಾಥ್, ಹುಲಿ ಇರುವಿಕೆ ಪತ್ತೆ ಆಗಿದೆ. ಅದಕ್ಕೆ ಪೂರಕವಾಗಿ ಹುಲಿ ಹೆಜ್ಜೆ ಗುರುತು ಸಿಕ್ಕಿವೆ. ಅಲ್ಲದೆ ಬಂಡೆ ಕಲ್ಲು ಮೇಲೆ ಹುಲಿ ಓಡಾಟವಾಗಿ ಅದರ ರೋಮಗಳು ದೊರೆತಿವೆ. ತೋಟದಲ್ಲಿ ಹುಲಿ ಮಲಗಿದ ಕುರುಹುಗಳು ಜತೆಗೆ ಮೂತ್ರ ವಿಸರ್ಜನೆ ಮಾಡಿರುವುದು ಪತ್ತೆಯಾಗಿದೆ. ಹುಲಿ ಹೆಜ್ಜೆಗಳನ್ನು ಗಮನಿಸಿದಾಗ ಇದು ವಯಸ್ಕ ಹುಲಿ ಎನ್ನುವುದು ಪ್ರಾಥಮಿಕವಾಗಿ ಕಂಡುಬರುತ್ತಿದೆ. ಮಧ್ಯಾಹ್ನದ ಬಳಿಕ ಸುಮಾರು 70 ಸಿಬ್ಬಂದಿ ಜತೆಗೆ ಅದರ ಪತ್ತೆಗೆ ಕಾರ್ಯಾಚರಣೆ ಆರಂಭ ಮಾಡಲಾಗುವುದು. ಆಗಲೂ ಪತ್ತೆ ಆಗದಿದ್ದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿ, ಸಾರ್ವಜನಿಕ ಮಾಹಿತಿ ಮೇರೆಗೆ ಅವಘಡ ಘಟಿಸುವ ಮುನ್ನ ಎಚ್ಚೆತ್ತುಕೊಳ್ಳುವ ಉದ್ದೇಶದಿಂದ ಹುಲಿ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದೇವೆ. ಡಿಸಿಎಫ್ ಜಗನ್ನಾಥ್ ಅವರು ಕೂಡಲೇ ಸ್ಪಂದಿಸಿ ಹುಲಿ ಇರುವಿಕೆಯನ್ನು ದೃಢಪಡಿಸಿದ್ದಾರೆ. ಹುಲಿ ಸೆರೆ ಹಿಡಿಯಲು ಅನುಮತಿ ಅವಶ್ಯಕವಿದೆ. ಆದಷ್ಟು ಬೇಗನೆ ಹುಲಿ ಸೆರೆ ಹಿಡಿಯಲು ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಭಯ ಸ್ವಲ್ಪ ಮಟ್ಟಿಗೆ ದೂರವಾಗಿದೆ ಎಂದರು.
ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಉಪವಲಯ ಅರಣ್ಯಾಧಿಕಾರಿ ಟಿ.ಎನ್.ಪ್ರಶಾಂತ್ ಕುಮಾರ್, ಅರಣ್ಯ ರಕ್ಷಕ ನಾಗರಾಜ್ ರಡ ರಟ್ಟಿ, ಆನೆ ಕಾರ್ಯಪಡೆ ಸಿಬ್ಬಂದಿ, ಗ್ರಾಮಸ್ಥರಾದ ಬಾಬು, ಅಜೇಯ ರಾವ್, ವಿ.ಎಸ್.ಪ್ರೀತಮ್, ಪ್ರಕಾಶ್, ಅಕ್ಷಯ್ ಇದ್ದರು.