

ಗುಂಡ್ಲುಪೇಟೆ: ದಸರಾ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬಂಡೀಪುರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಸಫಾರಿಗೆ ಹೋಗುವವರಿಗೆ ಹುಲಿಗಳು ದರ್ಶನ ನೀಡುತ್ತಿವೆ.
ರಾಜ್ಯದ ನಾನಾ ಮೂಲೆಗಳಿಂದ ಮೈಸೂರಿನ ದಸರೆಗೆ ಆಗಮಿಸುತ್ತಿರುವ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ. ಸಫಾರಿಗೆ ಹೋಗುವ ಹೆಚ್ಚಿನವರಿಗೆ ವನ್ಯಜೀವಿಗಳು ದರ್ಶನ ನೀಡುತ್ತಿರುವುದು ಪ್ರವಾಸಿಗರಿಗೆ ಮುದ ನೀಡುತ್ತಿವೆ. ಹಿಂದೆ ತನ್ನ 4 ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮೂರ್ಕೆರೆ ಫೀ ಮೇಲ್ ನಾಪತ್ತೆ ನಂತರ, ಅಪರೂಪವಾಗಿದ್ದ ವ್ಯಾಘ್ರದರ್ಶನ ಇತ್ತೀಚೆಗೆ ಮರುಕಳಿಸಿದೆ.
ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಫಾರಿ ಮಾರ್ಗದ ಕೆರೆಕಟ್ಟೆಗಳಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ತನ್ನ ಸದೃಢ ದೇಹದಿಂದ ಪ್ರವಾಸಿಗರಿಂದ ಭೀಮ ಎಂದು ಕರೆಯಲ್ಪಡುವ ಗಂಡುಹುಲಿ ತನ್ನ ಗಾಂಭೀರ್ಯದಿಂದ ಗಮನ ಸೆಳೆಯುತ್ತಿದೆ. ಅಲ್ಲದೆ ಸಫಾರಿ ವಲಯದ ಆಲಗಟ್ಟ ಕೆರೆಯಲ್ಲಿ ಇತ್ತೀಚೆಗೆ ಹೆಣ್ಣು ಹುಲಿಯೊಂದು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಅಲಗಟ್ಟ ಫೀಮೇಲ್ ಎಂದು ಕರೆಯಲಾಗುತ್ತಿದೆ. ನೀರು ಕುಡಿಯಲು ಮೆಲ್ಲಮೆಲ್ಲನೆ ಹೆಜ್ಜೆ ಹಾಕಿ ಸಾಗುತ್ತಿರುವ ದೃಶ್ಯ ಕಂಡು ಪ್ರವಾಸಿಗರು ಪುಳಕಿತಗೊಂಡರು. ಈ ವೇಳೆ ಹುಲಿಯ ಚಲನವಲನ ಕಂಡು ಮೊಬೈಲ್‌ನಲ್ಲಿ ವಿಡಿಯೋ ದೆರೆ ಹಿಡಿದು ಸಂತಸ ಪಟ್ಟಿದ್ದಾರೆ. ನಾಚಿಕೆ ಸ್ವಭಾವದ ಈ ಹೆಣ್ಣುಹುಲಿ ಇನ್ನೂ ಸಂಕೋಚ ಬಿಟ್ಟಿಲ್ಲದಿರುವುದರಿಂದ ಒಂದೆರಡು ವಾಹನಗಳನ್ನು ಕಂಡ ಕೂಡಲೇ ನಿಧಾನಕ್ಕೆ ಕಾಡಿನೊಳಗೆ ಮರೆಯಾಗುತ್ತಿದೆ.
ದಸರಾ ರಜಾ ವೇಳೆಯಲ್ಲಿ ಕುಟುಂಬ ಸಮೇತ ಬರುವ ಪ್ರವಾಸಿಗರು ಬಂಡೀಪುರದ ಸಫಾರಿ ವಲಯಗಳಿಗೆ ಭೇಟಿ ನೀಡುತ್ತಿದ್ದು, ಸಫಾರಿ ವೇಳೆಯಲ್ಲಿ ಸಿಗುವ ವನ್ಯಜೀವಿಗಳ ಸಹಜ ಜೀವನ ಕಂಡು ಪುಳಕಿತರಾಗುತ್ತಿದ್ದಾರೆ. ಹುಲಿ ಕಂಡರಂತೂ ಫುಲ್ ಖುಷ್ ಆಗಿ ಅದರ ವಿಡಿಯೋವನ್ನು ಸ್ಟೇಟಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುವುದು ಸಾಮಾನ್ಯವಾಗಿದೆ.