ಮೈಸೂರಿನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ

tiger
Published on

ಮೈಸೂರು: ಮೈಸೂರು ತಾಲೂಕಿನ ಚಿಕ್ಕಕಾನ್ಯದಲ್ಲಿ 2 ತಿಂಗಳ ಬಳಿಕ ಹುಲಿ ಮತ್ತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತೋಟದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಇದನ್ನು ಆಧರಿಸಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಹೊರಬಂದ ಹೆಣ್ಣು ಹುಲಿಯೊಂದು ಮೈಸೂರು ವಿಭಾಗ ವ್ಯಾಪ್ತಿಯ ಸರಗೂರು ಸಮೀಪದ ಚಿಕ್ಕನಹಳ್ಳಿಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿ ಅರೈಕೆ ಮಾಡಿದ್ದು, ಕಳೆದ 4 ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟಿದ್ದ ಒಂದೂವರೆ ವರ್ಷದ ಮರಿಗಳು ಮೈಸೂರು ಸುತ್ತಮುತ್ತಲಿನ ಗ್ರಾಮಗಳ ಹೊರವಲಯದಲ್ಲೇ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು.


ಟಿ-7 ಹೆಸರಿನ ಹೆಣ್ಣು ಹುಲಿ ಮರಿ ಮೈಸೂರು ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ ಸುತ್ತಮುತ್ತ ಬೀಡುಬಿಟ್ಟಿತ್ತು. ಟಿ-6 ಹೆಸರಿನ ಗಂಡು ಹುಲಿ ಮರಿ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುವಾಗ ಕಾರಿಗೆ ಸಿಲುಕಿ ಮೃತಪಟ್ಟಿತ್ತು. ಕಡಕೊಳ ಬಳಿ ಡಿ.28ರಂದು ಟಿ-9 ಹೆಸರಿನ ಹುಲಿ ಕಾಣಿಸಿಕೊಂಡಿತ್ತು.

ನಂತರ ಮೂರು ವಾರದ ನಂತರ ಟಿ-9 ಹುಲಿ ಶ್ರೀರಂಗಪಟ್ಟಣ ತಾಲೂಕಿನ ಬಿದರಳ್ಳಿಹುಂಡಿ-ಚನ್ನಹಳ್ಳಿ ಬಳಿ ಪ್ರತ್ಯಕ್ಷವಾಗಿತ್ತು. ಚಿಕ್ಕಕಾನ್ಯ ಬಳಿ ಕಾಣಿಸಿಕೊಂಡಿದ್ದ ಹುಲಿ ನಿಗೂಢವಾಗಿತ್ತು. ಅದು ಅರಣ್ಯ ಪ್ರದೇಶಕ್ಕೆ ವಾಪಸ್ ಆಗಿರಬಹುದು ಎಂದು ಅಂದಾಜಿಸಲಾಗಿತ್ತು. ಇದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.


ಆದರೆ, 2 ತಿಂಗಳ ಬಳಿಕ ಮತ್ತೆ ಚಿಕ್ಕಕಾನ್ಯ ಬಳಿ ಹುಲಿ ಓಡಾಟದ ಮಾಹಿತಿ ಹರಿದಾಡಿದೆ. ಗ್ರಾಮದ ಜಮೀನು ಹಾಗೂ ತೋಟದಲ್ಲಿ ಹುಲಿ ಸಂಚರಿಸಿರುವ ಹೆಜ್ಜೆ ಗುರುತು ಪತ್ತೆಯಾಗಿವೆ. ಇದನ್ನು ಗಮನಿಸಿದ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಹೆಜ್ಜೆ ಗುರುತು ಹುಲಿಯದ್ದೇ ಎಂದೇ ದೃಢಪಡಿಸಿದ್ದಾರೆ.


ಹೆಜ್ಜೆ ಗುರುತನ್ನು ಇಂದು ಓಡಾಡಿರುವ ಹುಲಿ ಈ ಹಿಂದೆ ಕಾಣಿಸಿಕೊಂಡ ಹುಲಿಯೇ ಅಥವಾ ಬೇರೆ ಹುಲಿಯೇ ಎಂದು ಪರಿಶೀಲಿಸಲು ಟೈಗರ್ ಸೆಲ್‌ಗೆ ಕಳುಹಿಸಲಾಗಿದೆ. ಈ ಹೆಜ್ಜೆ ಗುರುತು ದೊಡ್ಡದಾಗಿದ್ದು, ಅದು ದೊಡ್ಡ ಹುಲಿ ಅಥವಾ ತಾಯಿ ಹುಲಿ ಇರಬಹುದೆಂದು ಅನುಮಾನ ವ್ಯಕ್ತವಾಗಿದೆ.
‘ಚಿಕ್ಕಕಾನ್ಯ ಬಳಿ ತೋಟದಲ್ಲಿ ಹುಲಿ ಸಂಚರಿಸಿರುವ ದೃಶ್ಯವನ್ನು ಯಾರೂ ಗಮನಿಸಿಲ್ಲ. ಹುಲಿ ನೋಡಿದ ಬಗ್ಗೆ ಯಾರಿಂದಲೂ ಮಾಹಿತಿ ಲಭ್ಯವಾಗಿಲ್ಲ. ಕೇವಲ ಹೆಜ್ಜೆ ಗುರುತುಗಳಷ್ಟೇ ದೊರೆತಿವೆ. ಇದನ್ನು ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಡಿಸಿಎಫ್ ಡಾ. ಬಸವರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net