

ಬೆಂಗಳೂರು: ರಾಜ್ಯದಲ್ಲಿ ಹುಲಿಗಳನ್ನು ಸಂರಕ್ಷಿಸುವ ಜತೆಗೆ ಹುಲಿ ಸಂರಕ್ಷಿತ ಉದ್ಯಾನವನಗಳನ್ನು ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸುವ ಮೂಲಕ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ 11ನೇ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆ ಮಂಗಳವಾರ ನಡೆಸಿದ ಅವರು, ನಾಗರಹೊಳೆಯ 100 ಚದರಡಿ ಸಂರಕ್ಷಿತ ಪ್ರದೇಶದಲ್ಲಿ 12 ಹುಲಿಗಳಿವೆ. ಇಡೀ ದೇಶದಲ್ಲಿ ರಾಜ್ಯಕ್ಕೆ 3ನೇ ಸ್ಥಾನವಿದೆ. ಹುಲಿಗಳ ಸಂರಕ್ಷಣೆ ಜತೆಗೆ ಅವುಗಳ ಸಂತತಿಯನ್ನು ಉಳಿಸಬೇಕಾಗಿದೆ ಎಂದರು. ವಿಶೇಷವಾಗಿ ಹುಲಿಗಳಿಂದ ಹಸುಗಳನ್ನು ರಕ್ಷಿಸಲೆಂದು ನಾಗರಹೊಳೆ ಹುಲಿ ಸಂರಕ್ಷಣಾ ಪ್ರತಿಷ್ಠಾನದಿಂದ ಸುರಕ್ಷಿತ ಶೆಡ್ಗಳನ್ನು ನಿರ್ವಿುಸಿದ್ದು, ಇವುಗಳ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹುಲಿ ಸಂರಕ್ಷಣಾ ಉದ್ಯಾನವನಗಳಲ್ಲಿ ಸ್ವಚ್ಛತೆ ಕಾಪಾಡುವುದೂ ಮುಖ್ಯವಾಗಿದ್ದು, ಪ್ರತಿಷ್ಠಾನದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮೃಗಾಲಯಕ್ಕೆ ಸವಲತ್ತು: ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸವಲತ್ತುಗಳನ್ನು ಅಭಿವೃದ್ಧಿಪಡಿಸಲಾಗುವುದು. ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಿಂದ ಅಗತ್ಯ ಕೆಲಸಗಳಿಗೆ ವಿನಿಯೋಗಿಸಿ, ಉಳಿದ ಅನುದಾನವನ್ನು ಮೂಲ ಸವಲತ್ತು ಅಭಿವೃದ್ಧಿಗೆ ಬಳಸಬೇಕು ಎಂದು ಅಧಿಕಾರಿಗಳಿಗೆ ಆನಂದ್ ಸಿಂಗ್ ತಿಳಿಸಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಅರಣ್ಯ ಪಡೆಗಳ ಮುಖ್ಯಸ್ಥರಾದ ಸಂಜಯ್ ಮೋಹನ್ ಇನ್ನಿತರ ಅಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..