ರಜತ ಧರಿಸಿದ್ದ ಪೆಂಡೆಂಟ್ ವಶಕ್ಕೆ

Rajat New
Published on

ಹುಬ್ಬಳ್ಳಿ : ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿದ್ದ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಪೆಂಡೆಂಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಅಳಿಯನಾಗಿರುವ ರಜತ ಉಳ್ಳಾಗಡ್ಡಿಮಠ ಅವರು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತನ್ನ ಮದುವೆ ಸಮಯದಲ್ಲಿ ರಜತ ಉಳ್ಳಾಗಡ್ಡಿಮಠ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಇಲ್ಲಿನ ದುರ್ಗದಬೈಲ್ ಬಳಿ ಇರುವ ರಜತ ಉಳ್ಳಾಗಡ್ಡಿಮಠ ಅವರ ಮನೆಗೆ ಭೇಟಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ನೇತೃತ್ವದ ತಂಡ, ಪೆಂಡೆಂಟ್ ಅನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿತು. 10-12 ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದ ತಂಡ, ಅಂದಾಜು ಒಂದು ತಾಸಿನವರೆಗೆ ಪರಿಶೀಲನೆ ಹಾಗೂ ವಿಚಾರಣೆ ನಡೆಸಿತು.

ಪೆಂಡೆಂಟ್ ಎಲ್ಲಿ ಖರೀದಿಸಿದ್ದು ?, ಉಡುಗೊರೆ ಕೊಟ್ಟಿದ್ದು ಯಾರು? ಎಂಬೆಲ್ಲ ಮಾಹಿತಿ ತಂಡ ಕಲೆ ಹಾಕಿತು. ವಶಪಡಿಸಿಕೊಂಡಿರುವ ಹುಲಿ ಉಗುರು ಮಾದರಿಯ ಪೆಂಡೆಂಟ್ ಅನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಫಲಿತಾಂಶ ಕಂಡುಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ವಶಪಡಿಸಿಕೊಂಡ ಪೆಂಡೆಂಟ್, ಹುಲಿಯ ಅಸಲಿ ಉಗುರು ಎಂದು ಸಾಬೀತಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರಿಮಳ ವಿ.ಎಚ್. ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಜತ ಉಳ್ಳಾಗಡ್ಡಿಮಠ, ಮದುವೆಯಲ್ಲಿ ಧರಿಸಿದ್ದ ಪೆಂಡೆಂಟ್ ನಿಜವಾದ ಹುಲಿ ಉಗುರು ಅಲ್ಲ. ಅದು ಫೈಬರ್ ಮಿಶ್ರಿತ ವಸ್ತುವಿನಿಂದ ಮಾಡಿದ್ದು. ಒಂದು ಪ್ರಾಣಿ ಹಿಂಸಿಸಿ, ಶೋಕಿ ಮಾಡುವ ವ್ಯಕ್ತಿ ನಾನಲ್ಲ. ಅರಣ್ಯ ಇಲಾಖೆಯವರ ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net