ಹುಲಿ, ಚಿರತೆ ಸಂಚಾರ ತಂದ ಆತಂಕ

ಹುಲಿ, ಚಿರತೆ ಸಂಚಾರ ತಂದ ಆತಂಕ
Published on

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹಿಂದೆ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಹುಲಿ, ಚಿರತೆಗಳು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವುದು ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರ ನಿದ್ದೆಗೆಡಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದ ಹುಲಿ, ಚಿರತೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುವ ಮೂಲಕ ಭೀತಿ ಉಂಟು ಮಾಡುತ್ತಿವೆ.

ಪಟ್ಟಣದ ದುಂದಾಸನಪುರ ಬಡಾವಣೆಯ ಚನ್ನಪ್ಪ ಅವರ ಜಮೀನಿನಲ್ಲಿ ಶನಿವಾರ ಭಾರೀ ಗಾತ್ರದ ವನ್ಯಜೀವಿಯ ಹೆಜ್ಜೆಗುರುತು ಪತ್ತೆಯಾಗಿದೆ. ಇದರ ಗಾತ್ರ ನೋಡಿ ಹುಲಿ ಬಂದಿದೆ ಎಂದು ಭಾವಿಸಿದ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಫರ್ ವಲಯದ ಅರಣ್ಯ ಸಿಬ್ಬಂದಿ ಅದು ಚಿರತೆಯ ಹೆಜ್ಜೆ ಎಂದು ಖಚಿತಪಡಿಸಿದ್ದಾರೆ.

ಗುರುವಾರ ರಾತ್ರಿ ಹುತ್ತೂರು ಗ್ರಾಮದ ಶಿವಪ್ಪ ಅವರ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಸಂಜೆ ಸಮೀಪದ ದೇಪಾಪುರ ಗ್ರಾಮದ ಗುರುಮಲ್ಲಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ನಡೆಸಿದ್ದರಿಂದ ಹಸು ಸಾವಿಗೀಡಾಗಿದೆ. ಕುಂದಕೆರೆ ಗ್ರಾಮದ ನಾಗಮಲ್ಲಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಎರಡು ಹಸುಗಳ ಮೇಲೆ ಹುಲಿ ದಾಳಿ ಮಾಡಿದೆ. ಘಟನೆಯಲ್ಲಿ ಒಂದು ಸ್ಥಳದಲ್ಲಿಯೇ ಸಾವಿಗೀಡಾದರೆ ಮತ್ತೊಂದು ತೀವ್ರ ಗಾಯದಿಂದ ಬಳಲುವಂತಾಗಿದೆ.

ಹುತ್ತೂರು ಹಾಗೂ ದೇಪಾಪುರ ಗ್ರಾಮಗಳಲ್ಲಿ ಚಿರತೆ ಮತ್ತು ಹುಲಿ ದಾಳಿಗೆ ಜಾನುವಾರುಗಳು ಸಾವಿಗೀಡಾಗಿವೆ. ಚಿರತೆಯ ಸೆರೆಗೆ ಬೋನು ಅಳವಡಿಸಿ ಹುಲಿಯನ್ನು ಕಾಡಿಗಟ್ಟಲು ಕೂಂಬಿಂಗ್ ನಡೆಸಲಾಗುವುದು.

ಶಿವಕುಮಾರ್, ಬಫರ್ ವಲಯದ ಪ್ರಭಾರ ಆರ್.ಎಫ್.ಒ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net