

ಗುಂಡ್ಲುಪೇಟೆ: ತಾಲೂಕಿನ ದೇಶೀಪುರ ಕಾಲನಿಯಲ್ಲಿ ಆದಿವಾಸಿ ಮಹಿಳೆಯನ್ನು ಕೊಂದ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ವೇಳೆಯಲ್ಲಿ ನಾನಾ ಗ್ರಾಮಗಳಲ್ಲಿ ಹಾಡಹಗಲೇ ಹುಲಿ, ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡುತ್ತಿವೆ.
ತಾಲೂಕಿನ ಕುರುಬರಹುಂಡಿ, ಹಾಲಹಳ್ಳಿ, ಕಲ್ಲಹಳ್ಳಿ, ಸಂಪಿಗೆಪುರ ಮುಂತಾದ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡರೆ, ಮರಳಾಪುರ, ಕೆಲಸೀಪುರ ಪಡಗೂರು ಗ್ರಾಮಗಳಲ್ಲಿ ಚಿರತೆಗಳು ದಾಳಿ ನಡೆಸುತ್ತಿವೆ. ಕಾಡಂಚಿನ ಗ್ರಾಮಗಳಿಗಿಂತ ಕಾಡಿನಿಂದ ದೂರವಿರುವ ಬಫರ್ ವಲಯದ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಜತೆಗೆ ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದು ಜನರಲ್ಲಿ ಭೀತಿಯುಂಟು ಮಾಡಿದೆ.
ಮೂರು ದಿನಗಳಲ್ಲಿ ಸೋಮಹಳ್ಳಿ ರಸ್ತೆಬದಿಯ ಜಮೀನಿನಲ್ಲಿ ಮಲಗಿದ್ದ ಹುಲಿಯನ್ನು ಕಂಡ ಪ್ರಯಾಣಿಕರು ಜೋರಾಗಿ ಕೂಗಿದಾಗ ಹುಲಿ ಪೊದೆಯತ್ತ ಓಡಿಹೋಗಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮರುದಿನ ಸಮೀಪದ ಮರಳಾಪುರದ ಜಮೀನು ಮತ್ತು ಹಾಲಹಳ್ಳಿ ಡ್ಯಾಂ ಬಳಿ ಇರುವ ತೋಟಪ್ಪ ಎಂಬ ರೈತರ ಪಂಪ್‌ಹೌಸ್ ಬಳಿ ಕುಳಿತು ಘರ್ಜಿಸುತ್ತಿದ್ದ ಹುಲಿಯನ್ನು ನೋಡಿದ ವಾಹನ ಸವಾರರು ಇದನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದು ವೈರಲ್ ಮಾಡುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಭಾನುವಾರ ಕೆಲಸೀಪುರ ಗ್ರಾಮದ ಸುತ್ತಮುತ್ತಲಿನ ಜಮೀನುಗಳ ಬಳಿ ಸುಳಿದಾಡುತ್ತಿರುವ ಚಿರತೆಗಳು ಒಂದೇ ದಿನ ರೈತರು ತಮ್ಮ ಜಮೀನುಗಳಲ್ಲಿ ಸಾಕಿರುವ ನಾಲ್ಕು ನಾಯಿಗಳನ್ನು ಎಳೆದ್ದೊಯ್ದಿವೆ. ಪಡಗೂರು ಗ್ರಾಮದಲ್ಲಿ ಚಿರತೆಗಳ ದಾಳಿ ಮುಂದುವರೆದಿದೆ. ಈ ಸಂದರ್ಭದಲ್ಲಿ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಚಿರತೆಯನ್ನು ಕಣ್ಣರೆ ಕಂಡಿದ್ದರಿಂದ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. ರೈತರು ಜಾನುವಾರುಗಳೊಂದಿಗೆ ಜಮೀನುಗಳಿಗೆ ಹೋಗಲು ಭಯಪಡುವಂತಾದೆ.
ಸಾರ್ವಜನಿಕರಲ್ಲಿ ಉಂಟಾಗುತ್ತಿರುವ ಭೀತಿ ನಿವಾರಿಸಲು ಅರಣ್ಯ ಇಲಾಖೆ ಸಿಬ್ಬಂದಿ ವನ್ಯಜೀವಿಗಳ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿ ಕೂಂಬಿಂಗ್ ನಡೆಸುತ್ತಿದೆ. ಅವುಗಳ ಸೆರೆಗೆ ಬೋನು ಅಳವಡಿಸಿ ಚಿರತೆಗಳನ್ನು ಆಕರ್ಷಿಸಲು ಮೇಕೆಯನ್ನು ಕೂಡಿ ಹಾಕುತ್ತಿದ್ದಾರೆ. ಆದರೆ ಚಾಲಾಕಿ ಚಿರತೆಗಳು ಬೋನಿನತ್ತ ಸುಳಿಯದೆ ಚಳ್ಳೆಹಣ್ಣು ತಿನ್ನಿಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದರೆ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸುತ್ತಿದೆ.