ಬಿಂಕದಕಟ್ಟಿ ಮೃಗಾಲಯದಲ್ಲಿ ಹುಲಿ ಸಾವು

tiger
Published on

ಗದಗ: ಕಳೆದ 16 ವರ್ಷಗಳಿಂದ ಬಿಂಕದಕಟ್ಟಿ ಮೃಗಾಲಯದಲ್ಲಿದ್ದ ಅನಸೂಯ ಹೆಸರಿನ 16 ವರ್ಷದ ಹೆಣ್ಣು ಹುಲಿ ಭಾನುವಾರ ಮೃತಪಟ್ಟಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಅಸುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾಜುದ್ದೀನ ಓಲೇಕಾರ ಸಮ್ಮುಖದಲ್ಲಿ ಭಾನುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃಗಾಲಯ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂರುವರೆ ತಿಂಗಳು ಇದ್ದಾಗ ಈ ಹುಲಿಯನ್ನು ಮೈಸೂರು ಮೃಗಾಲಯದಿಂದ ಬಿಂಕದಕಟ್ಟಿಗೆ ತರಲಾಗಿತ್ತು. ಮೈಸೂರಿನಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರುವ ಸಂದರ್ಭದಲ್ಲಿಯೇ ಬೋನಿನ ಕಬ್ಬಿಣದ ಸರಳುಗಳನ್ನು ಕಚ್ಚಿದ್ದರಿಂದ ಹುಲಿಯ ಹಲ್ಲು, ದವಡೆ ಹಾನಿಯುಂಟಾಗಿತ್ತು. ಚಿಕಿತ್ಸೆ ನೀಡಿದ್ದರೂ ಮಾಂಸ ಹಾಗೂ ಗಟ್ಟಿ ಪದಾರ್ಥ ಜಗಿಯುವ ಶಕ್ತಿ ಕಳೆದುಕೊಂಡಿತ್ತು. ಅಂದಿನಿಂದಲೂ ಆಹಾರ ಸೇವನೆಯಲ್ಲಿ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೇ, ವಯಸ್ಸು ಕೂಡ ಆಗಿದ್ದರಿಂದ 16 ವರ್ಷದ ಹುಲಿ ಮೃತಪಟ್ಟಿದೆ ಎಂದು ಮೃಗಾಲಯ ಅಧಿಕಾರಿ ಸ್ನೇಹಾ ಪೂಜಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net