

ವಿಜಯವಾಣಿ ಸುದ್ದಿಜಾಲ ಮಂಗಳೂರು
ಎಳೆಯ ಪ್ರಾಯದ ಅತ್ಯಂತ ಆರೋಗ್ಯವಂತ ಹುಲಿಯ ಅನಿರೀಕ್ಷಿತ ಸಾವು ಆ ಪ್ರಾಣಿಯನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ ನಾಲ್ಕು ದಿನಗಳ ಹಿಂದೆಯಷ್ಟೇ ಮೈಸೂರು ಮೃಗಾಲಯಕ್ಕೆ ಕಳುಹಿಸಿದ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದ ತಂಡದಲ್ಲಿ ದಿಗ್ಭ್ರಮೆ ಹುಟ್ಟಿಸಿದೆ.
ಸಾಯುವ ಅಥವಾ ಕಾಯಿಲೆ ಬಿದ್ದ ಯಾವುದೇ ಲಕ್ಷಣ ಆ ಹುಲಿ ಮತ್ತು ಅದರ ಜತೆಗೆ ಮೃತಪಟ್ಟ ಕಾಳಿಂಗ ಸರ್ಪದಲ್ಲಿ ಇರಲಿಲ್ಲ. ಇದೊಂದು ದೊಡ್ಡ ದುರಂತ. ವಿಷಯ ತಿಳಿದು ನಮ್ಮ ಉದ್ಯಾನವನದ ಸಿಬ್ಬಂದಿಯೂ ತುಂಬಾ ವ್ಯಥೆಪಟ್ಟರು ಎಂದು ಪ್ರತಿಕ್ರಿಯಿಸಿದವರು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ.
ಸಾಮಾನ್ಯವಾಗಿ ಸ್ಥಳ ಬದಲಾದರೆ ಎರಡು ಅಥವಾ ಮೂರು ದಿನ ಪ್ರಾಣಿಗಳು ಆಹಾರ ಕೂಡ ಸೇವಿಸುವುದಿಲ್ಲ. ಆದರೆ ಈ ಹುಲಿ ಮೈಸೂರಿಗೆ ಸ್ಥಳ ಬದಲಾವಣೆ ಮಾಡಿದ ಮರುದಿನದಿಂದಲೇ ಆಹಾರ ಸೇವಿಸುತ್ತಾ ಇತ್ತು. ಅದರ ಅರ್ಥ ಅದು ಅಲ್ಲಿ ಕಂಫರ್ಟೆಬಲ್ ಆಗಿತ್ತು ಎಂದು ಭಾವಿಸಬಹುದು. ಮರಣೋತ್ತರ ಪರೀಕ್ಷೆ ಸಂದರ್ಭದಲ್ಲೂ ಹುಲಿಯ ಹೊಟ್ಟೆಯಲ್ಲಿ ಸುಮಾರು ಒಂದು ಕೆಜಿಯಷ್ಟು ಮಾಂಸವಿತ್ತು. ಆರೋಗ್ಯದಿಂದಲೇ ಇದ್ದ ಹುಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಾಣ ಬಿಟ್ಟಿತು ಎಂದು ಮೈಸೂರು ಉದ್ಯಾನವನ ಸಂಪರ್ಕಿಸಿದಾಗ ತಿಳಿಯಿತು ಎಂದವರು ವಿವರಿಸಿದರು.
ಮರಣೋತ್ತರ ವರದಿ: ಮರಣೋತ್ತರ ವರದಿಯಲ್ಲೂ ಹುಲಿಯಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರುವುದು ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೃದಯ ವೈಫಲ್ಯದಿಂದ ಸಾವು ಸಂಭವಿಸಿರಬಹುದು ಎಂದು ಊಹಿಸಬಹುದು. ಹೆಚ್ಚುವರಿ ಪರೀಕ್ಷೆಗಾಗಿ ಮೃತಪಟ್ಟ ಹುಲಿಯ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೃಗಾಲಯದ ಸಿಸಿಟಿವಿಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ. ಮಂಗಳವಾರ ಸಾಯಂಕಾಲ ಕೂಡ ಈ ಬಗ್ಗೆ ಮೈಸೂರು ಮೃಗಾಲಯದ ನಿರ್ದೇಶಕ ಡಾ.ಕುಲಕರ್ಣಿಯವರ ಜತೆ ಮಾತನಾಡಿದೆ ಎಂದವರು ಹೇಳಿದರು.
ಕಾಳಿಂಗ ಸರ್ಪಕ್ಕೆ ತುಂಬಾ ತಂಪಾದ ವಾತಾವರಣ ಇರಬೇಕು. ಮೈಸೂರಿಗೆ ತಲುಪಿದ ಬಳಿಕ ಅಂತಹ ವಾತಾವರಣ ಅದಕ್ಕೆ ದೊರೆಯುತ್ತದೆ. ಸಾಗಾಟ ಸಂದರ್ಭದಲ್ಲಿ ಗಾಯಗೊಂಡರೆ ಕೂಡ ಅದರ ಜೀವಕ್ಕೆ ತೊಂದರೆಯಾಗುತ್ತದೆ ಎಂದರು.
ಇತರ ಪ್ರಾಣಿಗಳು ಸೇಫ್: ಪ್ರಾಣಿ ವಿನಿಮಯ ಯೋಜನೆಯಂತೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ ಅಪರೂಪದ ನಾಲ್ಕು ಕಪ್ಪುಹಂಸಗಳು, ಎರಡು ಪಟ್ಟೆ ಹೈನಗಳು ಮತ್ತು ಎರಡು ಕಾಡು ಕೋಣ ಮರಿಗಳನ್ನು ತರಲಾಗಿತ್ತು. ಇವುಗಳು ಸುರಕ್ಷಿತವಾಗಿವೆ. ಇವುಗಳನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿ ಉಪಚರಿಸಲಾಗುತ್ತಿದೆ. ಇನ್ನು ಉವುಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನ್ನು ನೀಡಲಾಗಿತ್ತು. ಇದರಲ್ಲಿ ಒಂದು ಹುಲಿ ಹಾಗೂ ಒಂದು ಕಾಳಿಂಗ ಸರ್ಪ ಮೃತಪಟ್ಟಿದೆ.
ಎಳೆಯ ಪ್ರಾಯದ ಅತ್ಯಂತ ಆರೋಗ್ಯವಂತ ಹುಲಿಯ ಸಾವು ಪಿಲಿಕುಳ ಜೈವಿಕ ಉದ್ಯಾನವನದ ಎಲ್ಲರಿಗೂ ತುಂಬಾ ದುಃಖ ತಂದಿದೆ. ಆ ಹುಲಿಯನ್ನು ಕೊಡುವುದಕ್ಕೆ ಮೃಗಾಲಯದ ಸಿಬ್ಬಂದಿಗೆ ಯಾರಿಗೂ ಮನಸಿರಲಿಲ್ಲ. ಬೇರೆ ಹುಲಿಯನ್ನು ಕೊಡೋಣ ಎನ್ನುವ ಸಲಹೆಯೂ ಕೆಲವರಿಂದ ಬಂದಿತ್ತು. ಯಾಕೆಂದರೆ ಆ ಹುಲಿ ಇತರ ಪ್ರಾಣಿಗಳಿಗಿಂತ ತುಂಬಾ ಫ್ರೆಂಡ್ಲಿ ಇತ್ತು. ಎಚ್.ಜಯಪ್ರಕಾಶ್ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ