

ಎಚ್.ಡಿ.ಕೋಟೆ: ಪಟ್ಟಣದ ಚಾಕಹಳ್ಳಿ ಬಳಿ ಸುಮಾರು ಒಂದೂವರೆ ವರ್ಷದ ಗಂಡು ಹುಲಿಯ ಮೃತದೇಹ ಶನಿವಾರ ಪತ್ತೆಯಾಗಿದ್ದು, ಮತ್ತೊಂದು ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಗ್ರಾಮದ ಶಿವಣ್ಣನಾಯಕ ಅವರ ಜೋಳದ ಜಮೀನಿನಲ್ಲಿ ಅರ್ಧಂಬರ್ಧ ತಿಂದಿರುವ ಹುಲಿಯ ಕಳೇಬರ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ ಜಮೀನಿನಲ್ಲಿ ಬೆಳೆದಿದ್ದ ಜೋಳಕ್ಕೆ ನೀರು ಹಾಯಿಸಲು ಶಿವಣ್ಣನಾಯಕ ತನ್ನ ಮಗನೊಂದಿಗೆ ತೆರಳಿದಾಗ ಹುಲಿ ಹೆಜ್ಜೆ ಗುರುತು ಪತ್ತೆ ಆಗಿದೆ. ಗಾಬರಿಗೊಂಡ ರೈತ ಗ್ರಾಮಕ್ಕೆ ತೆರಳಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ ಮೂರು ಗಂಟೆಯಾದರು ಸ್ಥಳಕ್ಕೆ ಅರಣ್ಯ ಇಲಾಖೆಯವರು ಬಾರದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜೋಳದ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಜಮೀನಿನ ಮಧ್ಯಭಾಗದಲ್ಲಿ ಹುಲಿ ಮೃತದೇಹ ಪತ್ತೆಯಾಗಿದೆ. ಹುಲಿ ಮೃತದೇಹವನ್ನು ನೋಡಿ ಮತ್ತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಚ್.ಡಿ.ಕೋಟೆ ಆರ್‌ಎಫ್‌ಒ ಹನುಮಂತರಾಜು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಹಿರಿಯ ಅಧಿಕಾರಿಗಳು ಪಶು ವೈದ್ಯಾಧಿಕಾರಿಗಳಾದ ಡಾ.ಮುಜಿಬ್, ಡಾ. ರಮೇಶ್ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಿಸಿಎಫ್ ಬಸವರಾಜು ಮಾತನಾಡಿ, ಪ್ರಾಥಮಿಕ ತನಿಖೆಯಿಂದ ಹುಲಿಯು ಮತ್ತೊಂದು ಹುಲಿಯ ಜತೆ ಕಾದಾಟದಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಮೃತದೇಹದ ಅಂಗಾಗಗಳನ್ನು ಕಳಿಸಲಾಗುವುದು. ನಂತರ ಹುಲಿ ಸಾವಿಗೆ ಕಾರಣಗಳು ತಿಳಿಯಲಿದೆ ಎಂದರು.
ಹೆಸರು ಹೇಳಲು ಇಚ್ಚಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಎರಡು ಹುಲಿಗಳ ನಡುವೆ ಕಾಳಗವಾಗಿದ್ದು, ಹುಲಿ ಮೃತಪಟ್ಟ ಸ್ಥಳದಲ್ಲಿ ಸುತ್ತಲೂ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವ ಹುಲಿ ಜೊತೆ ಕಾದಾಟದಲ್ಲಿ ಮೃತಪಟ್ಟಿದೆ ಎಂಬುದು ತಿಳಿದು ಬರಲಿದೆ. ನಾಳೆಯವರೆಗೂ ಪರಿಶೀಲನೆ ನಡೆಸಿ ನಂತರ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿಯ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ ಮತ್ತು ಮರಿ ಹುಲಿಗಳು ನಿರಂತರವಾಗಿ ರೈತರಿಗೆ ಕಾಣಿಸಿಕೊಂಡು ಭೀತಿ ಉಂಟು ಮಾಡಿದ್ದವು. ಪಟ್ಟಣ ವ್ಯಾಪ್ತಿಯಲ್ಲಿ ಹುಲಿ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಅರಣ್ಯ ಇಲಾಖೆಯ ಡಿಸಿಎಫ್ ಬಸವರಾಜು, ಎಸಿಎಫ್ ಅಭಿಷೇಕ್, ಪೊಲೀಸ್ ಸಿಬ್ಬಂದಿ ಶಬ್ಬೀರ್ ಹುಸೇನ್, ಹುಲಿ ಹಾಗೂ ಚಿರತೆ ಕ್ಷಪ್ರ ಕಾರ್ಯಪಡೆ ಸಿಬ್ಬಂದಿ ಇದ್ದರು.