ಗಣೇಶೋತ್ಸವದಲ್ಲಿ ಹುಲಿ ವೇಷದ ಮೆರುಗು

New Project (31)
Published on

ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಕೊನೆಯ ದಿನ ಭಾನುವಾರ ದಿನಪೂರ್ತಿ ಪೇಟೆಯಲ್ಲಿ ಹುಲಿವೇಷದ ತಂಡಗಳು ಕಾಣಿಸಿಕೊಂಡವು. ರಾತ್ರಿ ನಡೆದ ವಿಸರ್ಜನಾ ಮೆರವಣಿಗೆಯಲ್ಲೂ ಹುಲಿವೇಷ ತಂಡಗಳು ಮೆರುಗು ನೀಡಿದವು.

ಮೂಡುಬಿದಿರೆ ಗಣೇಶೋತ್ಸವ ಹಲವು ವಿಶೇಷತೆಗಳಿಂದ ಕೂಡಿದ್ದು, ಅದರಲ್ಲಿ ವಿವಿಧ ಸಂಘಟನೆಗಳು ತಮ್ಮದೇ ಹುಲಿವೇಷದ ತಂಡ ಕಟ್ಟಿಕೊಂಡು, ತಮ್ಮದೇ ಶೈಲಿಯಲ್ಲಿ ವಿವಿಧ ಕಾರ್ಯಕ್ರಮಗಳೊಡನೆ ಹುಲಿವೇಷ ಪ್ರಸ್ತುತಪಡಿಸುವುದು ಆಕರ್ಷಣೆ ಕೇಂದ್ರಬಿಂದು. ಬೆದ್ರ ಫ್ರೆಂಡ್ಸ್, ಫ್ರೆಂಡ್ಸ್ ಇಲೆವೆನ್ ಬೆದ್ರ, ಸರ್ವೋದಯ ಫ್ರೆಂಡ್ಸ್, ಪವರ್ ಫ್ರೆಂಡ್ಸ್ ಬೆದ್ರ, ಕೊರಗಪ್ಪರ ಹುಲಿ ಹೀಗೆ ಹಲವು ಸಂಘಟನೆಗಳು ಒಂದು ತಿಂಗಳಿನಿಂದ ಹುಲಿವೇಷವನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸಲು ಶ್ರಮಿಸಿವೆ.

ಎರಡು-ಮೂರು ದಿನಗಳಿಂದ ಊದು ಪೂಜೆ, ವಿವಿಧ ಕಾರ್ಯಕ್ರಮ ಹಮ್ಮಿಕೊಂಡ ತಂಡಗಳು ಭಾನುವಾರ ಬೆಳಗ್ಗಿನಿಂದಲೇ ಪೇಟೆಯ ವಿವಿಧ ಕಡೆ ಮೆರವಣಿಗೆ, ಹುಲಿವೇಷ ನರ್ತನ ಪ್ರಸ್ತುತಪಡಿಸುತ್ತಿದ್ದಾರೆ. ಸಾಯಂಕಾಲ ವೇಳೆ ಮೆರವಣಿಗೆ ಜತೆ ಸೇರಿಕೊಂಡ ತಂಡಗಳು ತಮ್ಮ ಹುಲಿವೇಷ ಪ್ರಸ್ತುತಪಡಿಸಿದರು.

ಗಣೇಶೋತ್ಸವ ಸಂಭ್ರಮಕ್ಕೆಂದು ಕಟ್ಟಿಕೊಂಡ ಸಂಘಟನೆಗಳಿಂದು ವರ್ಷವಿಡೀ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಅಶಕ್ತರಿಗೆ ಮನೆ ನಿರ್ಮಾಣ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಅನಾರೋಗ್ಯಪೀಡಿತರಿಗೆ ನೆರವು, ವಿದ್ಯಾರ್ಥಿಗಳಿಗೆ ನೆರವು ಹೀಗೆ ಹಲವು ವಿಧಗಳಲ್ಲಿ ಈ ತಂಡಗಳು ಸಮಾಜಸೇವೆಯಲ್ಲಿ ಸಕ್ರಿಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net