

ಗೋಣಿಕೊಪ್ಪ: ಶ್ರೀಮಂಗಲದ ವೆಸ್ಟ್ ನಮ್ಮೆಲೆ ಗ್ರಾಮದಲ್ಲಿ ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಂಬಿಂಗ್ ಚುರುಕುಗೊಳಿಸಲು
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅರಣ್ಯ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದರು.
ಕೂಂಬಿಂಗ್ ಮೇಲುಸ್ತುವಾರಿ ವಹಿಸಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು
ಪರಿಸ್ಥಿತಿಯ ಬಗ್ಗೆ ಶಾಸಕ ಪೊನ್ನಣ್ಣ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ, ಅರಣ್ಯ ಅಧಿಕಾರಿಗಳಿಗೆ ಕೂಂಬಿಂಗ್ ನಡೆಸುವಂತೆ ಶಾಸಕ ಪೊನ್ನಣ್ಣ ಸೂಚಿಸಿದರು. ಈ ಸಂದರ್ಭ ಮಡಿಕೇರಿ ವನ್ಯಜೀವಿ ಡಿಸಿಎಫ್ ನೆಹರು, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ, ಪ್ರಮುಖರಾದ ಸೂರಜ್ ಹೊಸೂರು, ನರೇಂದ್ರ ಕಾಮತ್ ಇದ್ದರು.
ಆಗ್ರಹ: ಕಳೆದ ವಾರದಿಂದ ಈ ವ್ಯಾಪ್ತಿಯಲ್ಲಿ ಹುಲಿಯ ಸಂಚಾರವಿದೆ. ಈಗಾಗಲೇ ಮೂರ್ನಾಲ್ಕು ಹಸುಗಳ ಮೇಲೆ ದಾಳಿ ನಡೆಸಿದೆ. ಶುಕ್ರವಾರ ಮಧ್ಯಾಹ್ನವೂ ಕೊಟ್ಟಿಗೆಗೆ ದಾಳಿ ಮಾಡಿ ಹಸುವನ್ನು ಘಾಸಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.