ಹುಲಿ ಉಗುರಿನ ಪ್ರಕರಣ: ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧನಂಜಯ ಗುರೂಜಿಗೆ ಎದುರಾಯ್ತು ಸಂಕಷ್ಟ

Dhananjaya
Published on

ತುಮಕೂರು: ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಧರಿಸಿದ್ದ ಬಿಗ್​ಬಾಸ್​​ ಸ್ಪರ್ಧಿ ವರ್ತೂರು ಸಂತೋಷ್ ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದ್ದು, ಇದೀಗ ಈ ಪ್ರಕರಣದಲ್ಲಿ ಕೆಲವು ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಿದೆ.

ನಟ ದರ್ಶನ್​ ಅವರು ಕೂಡ ಹುಲಿ ಉಗುರಿನ ಲಾಕೆಟ್​ ಧರಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ಅಲ್ಲದೇ ವಿನಯ್​ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್​ ಅವರು ಕ್ರಮ ಕೈ ಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿ ಈ ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.

ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ ಒಡವೆಗಳ ಜತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.

ಧನಂಜಯಸ್ವಾಮಿ ಹೇಳಿದ್ದೇನು?:  ಅರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಅದನ್ನ ಎಸೆದಿದ್ದೇನೆ ಎಂದು ಧನಂಜಯಸ್ವಾಮಿ ಅರಣ್ಯಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ.

ಧನಂಜಯಸ್ವಾಮಿ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ, ಎಸೆದಿರುವ ಉಗುರಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅರ್ಟಿಫಿಶಿಯಲ್ ಉಗುರನ್ನ ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗುರು ಧರಿಸಿದ್ದಕ್ಕೆ ಬಿಗ್​ ಬಾಸ್​ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನದ ಬೆನ್ನಲ್ಲೇ ಹಲವರು ಹುಲಿ ಉಗುರಿನ ಲಾಕೆಟ್​ ಧರಿಸಿಕೊಂಡಿದ್ದು, ಇದೀಗ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವರ್ತೂರ್ ಸಂತೋಷ್​ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net