

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಈಗ ಜಾಮೀನು ಸಿಕ್ಕಿದೆ.
ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ.
ಇಂದು ಸಂಜೆ ವೇಳೆಗೆ ವರ್ತೂರು ಸಂತೋಷ್ ಬಿಡುಗಡೆ ಆಗಲಿದ್ದಾರೆ. ಮತ್ತೆ ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಾರಾ ಎಂಬ ಕೌತುಕ ಇದೀಗ ಎಲ್ಲರಲ್ಲಿ ಮೂಡಿದೆ.
ಹಳ್ಳಿಕಾರ್ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ವರ್ತೂರು ಸಂತೋಷ್ ಜನಪ್ರಿಯತೆ ಗಳಿಸಿದ್ದರು. ಇದೇ ಕಾರಣಕ್ಕೆ ಅವರು ಬಿಗ್ ಬಾಸ್ಗೆ ಆಯ್ಕೆ ಆಗಿದ್ದರು. ಟ್ರೋಫಿ ಗೆಲ್ಲಬೇಕು ಎಂಬ ಆಸೆಯಿಂದ ಅವರು ಬಿಗ್ ಮನೆ ಪ್ರವೇಶಿಸಿದ್ದರು. ಆದರೆ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಮೇಲೆ ಅರಣ್ಯಾಧಿಕಾರಿಗಳ ಕಣ್ಣು ಬಿದ್ದಿದ್ದರಿಂದ ಅಕ್ಟೋಬರ್ 22ರ ರಾತ್ರಿ ಬಿಗ್ ಬಾಸ್ ಮನೆಗೆ ಹೋಗಿ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಜಾಮೀನು ಸಿಕ್ಕಿದೆ.