

ಮೈಸೂರು: ಬಂಡೀಪುರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದ್ದು, ಕಾರ್ಯಾಚರಣೆ ಸ್ಥಳದ ಬಳಿಯಲ್ಲಿಯೇ ಮತ್ತೊಂದು ಹುಲಿಯ ಉಪಟಳ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಎರಡು ಜಾನುವಾ ರುಗಳು ಹುಲಿಗಳಿಗೆ ಬಲಿಯಾಗಿವೆ.
ರತ್ನಮ್ಮ ಅವರು ಹುಲಿ ದಾಳಿಗೆ ಬಲಿಯಾದ ಜಾಗದಿಂದ 1 ಕಿ.ಮೀ. ಅಂತರದಲ್ಲಿ ಜಾನುವಾರವೊಂದನ್ನು ಹುಲಿ ಬೇಟೆಯಾಡಿದ್ದು, ರತ್ನಮ್ಮ ಅವರನ್ನು ಬಲಿ ಪಡೆದ ಹುಲಿಯು ಈ ಜಾನುವಾರನ್ನು ಬೇಟೆಯಾಡಿದೆ. ಇಲ್ಲಿಂದ 2.50 ಕಿ.ಮೀ. ದೂರದಲ್ಲಿ ಮತ್ತೊಂದು ಜಾನುವಾರ ಮತ್ತೊಂದು ಹುಲಿಯ ದಾಳಿಗೆ ಬಲಿಯಾಗಿದೆ. ಓಂಕಾರ ಮತ್ತು ಹೆಡಿಯಾಲ ಅರಣ್ಯ ವಲಯದಲ್ಲಿ ಹುಲಿಗಳ ಹಾವಳಿ ಹೆಚ್ಚುತ್ತಿರುವುದು ಸಹಜವಾಗಿಯೇ ಜನರಲ್ಲಿ ಆತಂಕ ಮನೆಮಾಡುವಂತೆ ಮಾಡಿದೆ.
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಕ್ಕೆ ಭಾನುವಾರ ಹುಲಿಯ ಘರ್ಜನೆ ಕೇಳಿಸಿದ್ದು, ಘರ್ಜನೆ ಕೇಳಿ ಬಂದ ಶಬ್ದದ ಕಡೆಯಲ್ಲಿ ಡ್ರೋಣ್ ಹಾಗೂ ಸಾಕಾನೆಗಳ ಮೂಲಕ ಹುಲಿಯನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಂಡರೂ ಹುಲಿಯ ಸುಳಿವು ಪತ್ತೆಯಾಗಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಸಿಬ್ಬಂದಿ ಹುಲಿ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾಗ ಬೆಳಗ್ಗೆ 11.45ರ ವೇಳೆಗೆ ಹುಲಿ ಹೆಜ್ಜೆಯ ಹೊಸ ಗುರುತು ಪತ್ತೆಯಾಗಿದೆ. ಹುಲಿ ಹೆಜ್ಜೆಯ ಜಾಡು ಹಿಡಿದು ಹೊರಟಾಗ ಕಾಳನಮುಂಟಿ ಸೋಲಾರ್ ಶೆಡ್ ಹತ್ತಿರ ಇದೇ ಹುಲಿಯು ಜಾನುವಾರು ಹತ್ಯೆ ಮಾಡಿದ್ದು, ಜನರ ಗಲಾಟೆಯಿಂದ ಹುಲಿಯು ಜಾನುವಾರುವನ್ನು ತಿನ್ನದೇ ಕಾಡಿನತ್ತ ಮುಖ ಮಾಡಿದೆ. ರತ್ನಮ್ಮ ಅವರನ್ನು ಹತ್ಯೆ ಮಾಡಿದ ಸ್ಥಳದಿಂದ ಕೇವಲ 1 ಕಿ.ಮೀ ಅಂತರದಲ್ಲಿಯೇ ಹುಲಿ ಜಾನುವಾರನ್ನು ಬೇಟೆಯಾಡಿದೆ.
ಈ ಸಂಬಂಧ ಹುಲಿಯ ಚಲನ-ವಲನಗಳನ್ನು ಗಮನಿಸಲು ಕ್ಯಾಮೆರಾಗಳನ್ನು ಅಳವಡಿಸಿ, ಇಲಾಖಾ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದ್ದು, ಹುಲಿಯನ್ನು ಕಂಡ ಕೂಡಲೇ ಅರವಳಿಕೆ ಮದ್ದನ್ನು ನೀಡಲು ಇಲಾಖಾ ಪಶುವೈದ್ಯಾಧಿಕಾರಿಗಳಿಗೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಧ್ಯಾಹ್ನ 3ಕ್ಕೆ ಓಂಕಾರ ಮತ್ತು ಹೆಡಿಯಾಲ ವಲಯ ಗಡಿಯ ಕಲ್ಲಾರೆಕಂಡಿ ಬಳಿ ಜಾನುವಾರುವನ್ನು ಹುಲಿಯು ಹತ್ಯೆ ಮಾಡಿದ್ದು, ಸದರಿ ಪ್ರದೇಶಕ್ಕೆ ಸಿಬ್ಬಂದಿ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದಾಗ ಇದು ಬೇರೆ ಹುಲಿಯಾಗಿದ್ದು, ಹೆಡಿಯಾಲ ವಲಯದಲ್ಲಿ ನಡೆದ ಘಟನಾ ಸ್ಥಳದಿಂದ ಈ ಘಟನಾ ಸ್ಥಳಕ್ಕೆ ಸುಮಾರು 2.50 ಕಿ.ಮೀ ಅಂತರದಲ್ಲಿದೆ. ಅಲ್ಲಿಯು ಸಹಾ ಡ್ರೋನ್ ಮೂಲಕ ಹುಲಿಯ ಚಲನ-ವಲನಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಕೊಂಬಿಂಗ್ ಮಾಡಲು ತಂಡವೊಂದನ್ನು ನಿಯೋಜಿಸಲಾಗಿದೆ. ಅಲ್ಲದೆ ಕ್ಯಾಮೆರಾ ಟ್ರಾಫ್‌ಗಳನ್ನು ಅಳವಡಿಸಲಾಗಿದೆ.
ಹುಲಿ ಸೆರೆ ಕಾರ್ಯಾರಣೆಗೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಒಟ್ಟು 207 ಜನರನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ, 100 ಗಿರಿಜನ ಸಿಬ್ಬಂದಿಯನ್ನು ಬಳಸಲಾಗಿದೆ. ಕಾರ್ಯಚರಣೆಯಲ್ಲಿ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್‌ಕುಮಾರ್, ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.