

ಮಡಿಕೇರಿ: ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಮೈತ್‌ಕಡು ಹೊಳೆಕೆರೆ ಎಂಬಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿರುವ ಘಟನೆ ಬುಧವಾರ ನಡೆದಿದೆ.
ಬೆಳಿಗ್ಗಿನ ಜಾವ ೬ ಗಂಟೆಗೆ ಎಂ.ಎಚ್.ಇಬ್ರಾಹಿಂ ತಮಗೆ ಸೇರಿದ ಹಸುವನ್ನು ಪಕ್ಕದ ಮೈತುಕಡು ಬಾಣೆ ಜಾಗದಲ್ಲಿ ಕಟ್ಟಿಹಾಕಿದ್ದಾರೆ. ಮನೆಗೆ ಬಂದು ನಂತರ ಹಸುವನ್ನು ನೋಡಲು ಹೋದ ಸಂದರ್ಭದಲ್ಲಿ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿರುವುದು ಕಂಡು ಬಂದಿದೆ. ಹುಲಿ ಹಸುವಿನ ಮಾಂಸವನ್ನು ಭಕ್ಷೀಸಿ ಪರಾರಿಯಾಗಿದೆ.
ಆನೆ ಮತ್ತು ಹುಲಿ ದಾಳಿಗಳು ನಿರಂತರ ನಡೆಯುತ್ತಿದೆ. ಈ ವಿಭಾಗದ ಜನರು ಭಯಭೀತರಾಗಿದ್ದು, ಕೂಡಲೇ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಜತೆಗೆ ಹಸು ಕಳೆದುಕೊಂಡಿರುವ ಇಬ್ರಾಹಿಂ ಎಂಬವರಿಗೆ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹುಲಿ ಸೆರೆ ಹಿಡಿಯುವವರೆಗೆಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಸದಸ್ಯರು ಮತ್ತು ಪಿಡಿಒ ತಿಳಿಸಿದ್ದಾರೆ. ಕೊಳಕೇರಿ ಗ್ರಾಮದ ಸದಸ್ಯ ಆಶ್ರಫ್, ಗ್ರಾಮಸ್ಥರು ಹುಲಿಯನ್ನು ಕೂಡಲೇ ಹಿಡಿಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮದ ಸದಸ್ಯರು, ಪಿಡಿಒ ಚೋಂದಕ್ಕಿ, ಅರಣ್ಯಾಧಿಕಾರಿ ಸುರೇಶ್, ಸಿಬ್ಬಂದಿಯವರು ಮತ್ತು ಪೋಲಿಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.