

ಗುಂಡ್ಲುಪೇಟೆ: ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಹುಲಿ, ಚಿರತೆಗಳ ದಾಳಿ ತೀವ್ರವಾಗುತ್ತಿದ್ದು ಕಳೆದ ಹದಿನೈದು ದಿನಗಳಿಂದ ತಾಲೂಕಿನ ಕಡತಾಳಕಟ್ಟೆಹುಂಡಿ ಸುತ್ತಮುತ್ತ ಸುಳಿದಾಡುತ್ತಿರುವ ಹುಲಿ ಬುಧವಾರ ಸಂಜೆ ಕರಕಲಮಾದಹಳ್ಳಿ ರಸ್ತೆಯ ಶಿವಕುಮಾರ್ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡು ರೈತರಲ್ಲಿ ಭೀತಿಯುಂಟು ಮಾಡಿದೆ.
ಕಳೆದ ಹತ್ತು ದಿನಗಳ ಹಿಂದೆ ಗ್ರಾಮದ ದೇವಪ್ಪ ಎಂಬುವರ ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಕೊಂದಿದ್ದ ಹುಲಿ ಮರುದಿನ ಕರಕಲಮಾದಹಳ್ಳಿ, ಶೀಲವಂತಪುರ, ಸೋಮನಪುರ ಗ್ರಾಮಗಳಲ್ಲಿಯೂ ಜಮೀನಿನಲ್ಲಿ ಮೇಯುತ್ತಿದ್ದ ಜಾನುವಾರುಗಳನ್ನು ಕೊಂದುಹಾಕಿದೆ. ಕಳೆದ ಗುರುವಾರ ರಾತ್ರಿ ಹುಲಿ ಕಂದೇಗಾಲ ಕೊಡಸೋಗೆ ರಸ್ತೆಯಲ್ಲಿ ಮಲಗಿ ಜನರ ಕಣ್ಣಿಗೆ ಬಿದ್ದಿದೆ. ರಾತ್ರಿ 10 ಗಂಟೆ ಸಮಯದಲ್ಲಿ ಪಟ್ಟಣದಿಂದ ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಾರ್ವಜನಿಕರು ನಡು ರಸ್ತೆಯಲ್ಲಿ ಮಲಗಿದ್ದ ಹುಲಿಯನ್ನು ಕಂಡು ಹೆದರಿದ್ದಾರೆ. ಹಿಂದೆಯೇ ಬರುತ್ತಿದ್ದ ಇತರ ವಾಹನಗಳವರು ನಿಂತು ಜೋರಾಗಿ ಹಾರ್ನ್ ಮಾಡಿದರೂ ಕದಲದೆ ದುರುಗುಟ್ಟಿ ನೋಡಿದ್ದರಿಂದ ಭೀತಿಗೊಳಗಾಗಿ ವಾಪಸಾಗಿದ್ದರು.
ಈ ನಡುವೆ ಇದೇ ಗ್ರಾಮಗಳ ಸುತ್ತಮುತ್ತ ಚಿರತೆಗಳು ಸಂಚರಿಸುತ್ತಿದ್ದು ಮೇಕೆ, ನಾಯಿಗಳು ಹಾಗೂ ಹಸುಗಳನ್ನು ಕೊಲ್ಲುತ್ತಿವೆ. ಚಿರತೆ ಹಾಗೂ ಹುಲಿಯ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಕ್ಯಾಮರಾ ಅಳವಡಿಸಿದ್ದರೂ ಅವು ಕ್ಯಾಮರಾ ಕಣ್ಣಿಗೆ ಬೀಳುತ್ತಿಲ್ಲ. ಇವುಗಳು ಸಂಚರಿಸುತ್ತಿದ್ದ ಪ್ರದೇಶಗಳಲ್ಲಿ ಬೋನು ಇರಿಸಿದ್ದರೂ ಚಾಲಾಕಿ ವನ್ಯಜೀವಿಗಳು ಬೋನಿನತ್ತ ಸುಳಿಯುತ್ತಿಲ್ಲ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಹುಲಿ ಸೆರೆಗೆ ಒತ್ತಾಯ: ಕಳೆದ ಒಂದು ತಿಂಗಳಿನಿಂದ ಹುಲಿ ಗ್ರಾಮದ ಸುತ್ತಮುತ್ತಲೇ ಓಡಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ದರೂ ಅರಣ್ಯ ಇಲಾಖೆ ಹುಲಿ ಸೆರೆಗೆ ಗಂಭೀರ ಪ್ರಯತ್ನ ನಡೆಸುತ್ತಿಲ್ಲ. ಇದರಿಂದ ರೈತರ ಸಾಕುಪ್ರಾಣಿಗಳು ಬಲಿಯಾಗುತ್ತಿದ್ದು ರೈತರು ತಮ್ಮ ಕೆಲಸ-ಕಾರ್ಯಗಳಿಗೆ ಜಮೀನುಗಳತ್ತ ಹೋಗಲು ಹೆದರುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದು ಕಾಡಿಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಜಿಲ್ಲಾಧ್ಯಕ್ಷ ಸಿ.ಶಿವಪ್ರಕಾಶ್ ಒತ್ತಾಯಿಸಿದ್ದಾರೆ.