

ಹುಬ್ಬಳ್ಳಿ : ದಿ ಇಂಡಸ್ ಆಂತ್ರಪ್ರಿನರ್ಸ್ (ಟೈ) ವತಿಯಿಂದ "ಭವಿಷ್ಯಕ್ಕಾಗಿ ಸಿದ್ಧಗೊಂಡ ಉದ್ಯಮಿ' ಧ್ಯೇಯ ವಾಕ್ಯದಡಿ 11ನೇ ಉದ್ಯಮಶೀಲತಾ ಶೃಂಗಸಭೆಯನ್ನು ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಫೆ. 1ರಿಂದ ಎರಡು ದಿನ ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 10ಕ್ಕೆ ಮಾಹಿತಿ ತಂತ್ರಜ್ಞಾನ ಹಾಗೂ ಬಯೋಟೆಕ್ನಾಲಜಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು.
ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್, ದುರ್ಗಾ ಗ್ರುಪ್ ಆಫ್ ಕಂಪನಿ ಸಿಇಒ ವೀರೇಶ ಉಂಡಿ, ಸ್ವರ್ಣ ಗ್ರುಪ್ ಆಫ್ ಕಂಪನಿ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಮಗ್ರ ಉತ್ತರ ಕರ್ನಾಟಕ ಭಾಗದ ಮಹಿಳೆಯರು, ಯುವ ಉದ್ಯಮಿಗಳ ಉನ್ನತಿಯ ಉದ್ದೇಶದೊಂದಿಗೆ ವಿಶೇಷ ಗಮನ ಹರಿಸಿ ಸಮಾವೇಶದ ಮೂಲಕ ಈ ಭಾಗದಲ್ಲಿ ಉದ್ಯಮಶೀಲತೆ ಉತ್ತೇಜಿಸಲಾಗುತ್ತಿದೆ.
ಟೈಕಾನ್ ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್) ಜತೆಗೂಡಿ ನವೋದ್ಯಮಿಗಳಿಗೆ ಉತ್ತೇಜನ ನೀಡುತ್ತಿದ್ದು, ಶಾರ್ಕ್ ಟ್ಯಾಂಕ್ ಮಾದರಿಯಲ್ಲಿ ಉದಯೋನ್ಮುಖ ನವೋದ್ಯಮಿಗಳಿಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ವಿಜೇತರಿಗೆ ಟಾಪ್ ಐದು ನವೋದ್ಯಮಿ ಕಂಪನಿಗಳು 25 ಲಕ್ಷ ರೂ. ಹಾಗೂ ಮೇಲ್ಪಟ್ಟ ಹೂಡಿಕೆಯನ್ನು ಪಡೆಯಲಿವೆ.
ಟೈ ಮಹಿಳಾ ಸಮಾವೇಶದ 8ನೇ ಆವೃತ್ತಿಯನ್ನು ವಿಭಿನ್ನ ರೀತಿಯಲ್ಲಿ ಸಂಘಟಿಸಲಾಗುತ್ತಿದೆ. ಕಾರ್ಯಾಗಾರಗಳು, ವ್ಯಾಪಾರ ಯೋಜನೆ ಸ್ಪರ್ಧೆಗಳ ಮೂಲಕ ಮಹಿಳಾ ಉದ್ಯಮಿಗಳನ್ನು ನಿರಂತರವಾಗಿ ಬೆಂಬಲಿಸಲು ಉದ್ದೇಶಿಸಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ್ ಪಾಟೀಲ್ ತಿಳಿಸಿದ್ದಾರೆ.