

ಹುಬ್ಬಳ್ಳಿ: ಪ್ರತಿಯೊಂದು ಉದ್ಯಮದಲ್ಲಿಯೂ ಸವಾಲುಗಳು ಇದ್ದೇ ಇರುತ್ತವೆ. ಅವುಗಳನ್ನು ಎದುರಿಸಲು ಯಾವುದೇ ಹೆದರಿಕೆ ಅಥವಾ ಹಿಂಜರಿಕೆ ಇರಬಾರದು, ಸಮಸ್ಯೆ ಚಿಕ್ಕದೆಂಬ ನಿರ್ಲಕ್ಷ್ಯವೂ ಬೇಡ, ಎಲ್ಲರ ಜತೆ ಮುಕ್ತವಾಗಿ ಮಾತನಾಡಬೇಕಾಗುತ್ತದೆ, ಆಗಲೇ ಸುಲಲಿತವಾಗಿ ಉದ್ಯಮ ಮುನ್ನಡೆಸಲು ಸಾಧ್ಯ ಎಂದು ವಿಜಯಾನಂದ ಟ್ರಾವೆಲ್ಸ್ ಪೆವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ ಅಭಿಪ್ರಾಯಪಟ್ಟರು.
ಇಲ್ಲಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಟೈ ಹುಬ್ಬಳ್ಳಿ ಶೃಂಗಸಭೆಯ ಎರಡನೇ ದಿನ "ಲೆಗಾಸಿ ಟು ಲೀಡರ್ ಶಿಪ್: ದಿ ನೆಕ್ಟ್ಸ ಜನರೇಶನ್ ಸ್ಟೀರಿಂಗ್ ಫ್ಯಾಮಿಲಿ ಎಂಟರಪ್ರೈಸಿಸ್' ಕುರಿತು ಏರ್ಪಡಿಸಿದ್ದ ಗೋಷ್ಠಿಯಲ್ಲಿ ಪರಂಪರೆಯ ನಾಯಕತ್ವದ ಬಗ್ಗೆ ಅವರು ಮಾತನಾಡಿದರು.
ಯಾವುದೇ ಬಿಜಿನೆಸ್ ಗೆ ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ. ಸಮಸ್ಯೆ ಎದುರಾದಾಗ ವಿಳಂಬ ಮಾಡಬಾರದು. ಪ್ರತಿ ಕ್ಷೇತ್ರದಲ್ಲಿ ಏಳು ಬೀಳುಗಳು ಇರುತ್ತವೆ. ಹಾಕಿಕೊಂಡ ಯೋಜನೆಗಳನ್ನು ಜಾರಿಗೊಳಿಸುವದು ಮಹತ್ವದ್ದು. ಬದಲಾವಣೆಗೆ ತೆರೆದುಕೊಳ್ಳುವ ಮನಸ್ಸು, ಛಲ ಕೂಡ ಅಗತ್ಯ ಎಂದರು.
ಟ್ರಾವೆಲ್ಸ್ ಬಿಜಿನೆಸ್ ನಲ್ಲಿ ತಂತ್ರಜ್ಞಾನ ಬಳಕೆಯೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹಾಗೆಂದು ತಾಂತ್ರಿಕತೆಯನ್ನು ಏಕಾಏಕಿ ಹೇರಲು ಸಾಧ್ಯವಿಲ್ಲ. ಯಾರಿಗೆ ಯಾವ ಕೆಲಸ ಸೂಕ್ತ ಎಂಬುದನ್ನು ನೋಡಬೇಕು. ಹೊಸದನ್ನು ಅಳವಡಿಸುವಾಗ ಅಷ್ಟೇ ಜಾಗರೂಕತೆ ಬೇಕು. ಆತ್ಮವಿಶ್ವಾಸದಿಂದ ಎಲ್ಲವನ್ನೂ ಎದುರಿಸಬೇಕು ಎಂದರು.
ಕಠಿಣ ಪರಿಶ್ರಮ ಇದ್ದಾಗ ಮಾತ್ರ ಉದ್ಯಮದ ಬೆಳವಣಿಗೆ ಎಂಬುದನ್ನು ನನ್ನ ಅಜ್ಜ ಡಾ. ವಿಜಯ ಸಂಕೇಶ್ವರ, ತಂದೆ ಡಾ. ಆನಂದ ಸಂಕೇಶ್ವರ ಅವರಿಂದ ಕಲಿತಿರುವೆ. ಫ್ಯಾಮಿಲಿ ಬಿಜಿನೆಸ್ ಆದರೂ ಹಂತಹಂತವಾಗಿ ನಾವು ಬೆಳೆಯಬೇಕಾಗುತ್ತದೆ. ಗುಣಮಟ್ಟದ ಸೇವೆ ಖಂಡಿತವಾಗಿ ಇರಬೇಕು ಎಂದ ಶಿವಾ ಸಂಕೇಶ್ವರ ಅವರು, ಟೈ ಹುಬ್ಬಳ್ಳಿ ಸಂಘಟನೆಯು ಹಲವಾರು ನವೋದ್ಯಮಿಗಳಿಗೆ ವೇದಿಕೆಯಾಗಿದೆ. ಪರಸ್ಪರ ಸಂಪರ್ಕ ಸಾಧಿಸಲು ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಭವ ಮಾರ್ಕೆಟಿಂಗ್ ವಿಪಿ ಧ್ರುವಚಂದ್ರ ಎಚ್.ಎನ್. ಮಾತನಾಡಿ, 30 ವರ್ಷದ ಹಿಂದೆ ಸ್ವಚ್ಚತೆಗೆ ಅಗತ್ಯವಾದ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದಾಗ ಹಲವು ಸವಾಲುಗಳು ಇದ್ದವು. ದೊಡ್ಡ ಮಟ್ಟದ ಕೆಲಸಗಾರರ ಅಗತ್ಯ ಇತ್ತು. ಅವರಿಗೆ ಕುಶಲತೆ ಕಲಿಸಬೇಕಾಗಿತ್ತು. ಜತೆಗೆ ಬ್ರಾಂಡ್ ಕ್ರಿಯೇಟ್ ಮಾಡಬೇಕಾಗಿತ್ತು. ಕೆಲಸಗಾರರಿಗೆ ತರಬೇತಿ ನೀಡುವ ಜತೆಗೆ ಉತ್ಪಾದನೆಯತ್ತ ಗಮನ ಹರಿಸುತ್ತ ಸಾಗಿದಂತೆ ಉದ್ಯಮವು ಬೆಳವಣಿಗೆಯತ್ತ ಸಾಗಿತು ಎಂದರು.
ಪರಿಸರ ಸ್ನೇಹಿ ವಸ್ತುಗಳು:
ಜಿಡಬ್ಲೂಪಿ ಸಲುಷನ್ಸ್ ಲಿಮಿಟೆಡ್ ಎಂಡಿ ಅಲ್ಬರ್ಟ್ ಫರ್ನಾಂಡಿಸ್ ಮಾತನಾಡಿ, ಸುಸ್ಥಿರ ಬಾಳಿಕೆಯ ವಸ್ತುಗಳ ಉತ್ಪಾದನೆ ಇಂದಿನ ಅಗತ್ಯ. ಅದರಿಂದ ಕಂಪನಿಗೆ ತಾನಾಗಿಯೇ ಹೆಸರು ಬರುತ್ತದೆ. ಉತ್ಪಾದನೆ ವೆಚ್ಚ ಕಡಿಮೆ ಮಾಡುವುದು, ಪುನರ್ಬಳಕೆ ಮುಂತಾದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಪರಿಸರ ಸ್ನೇಹಿ ವಸ್ತುಗಳ ಉತ್ಪಾದನೆಗೆ ಪ್ರೇರಣೆ ನೀಡಬೇಕು. ಇದು ಇಂದಿನ ಅಗತ್ಯ ಕೂಡ ಆಗಿದೆ. ಮಾರ್ಕೆಟ್ ನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಇರಬೇಕು ಎಂದರು.
ಬೆಲ್ಟೆಕ್ ಲಿಮಿಟೆಡ್ ಸಿಇಒ ಅಗಸ್ತ್ಯ ಬೆಲ್ಲದ ಮಾತನಾಡಿ, ಮುಂಬರುವ ದಿನಗಳು ಕೃತಕ ಬುದ್ಧಿಮತ್ತೆಯ ಯುಗವಾಗಲಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಬಿಜಿನೆಸ್ ಬೆಳೆಸುವ ಆಲೋಚನೆ ಮಾಡಬೇಕು. ಶಿಕ್ಷಣದಲ್ಲಿ ಇದರ ಅಗತ್ಯಗಳ ಜತೆ ಸಾಧ್ಯತೆಗಳು ಬಹಳಷ್ಟಿವೆ ಎಂದರು.
ಟೈ ಹುಬ್ಬಳ್ಳಿ ಆಯೋಜಿಸಿರುವ ಮಹತ್ವಪೂರ್ಣ ಶೃಂಗಸಭೆಯಲ್ಲಿ ಯುವ ಉದ್ಯಮಿಗಳಿಗೆ ಅದರಲ್ಲೂ ಕುಟುಂಬದ ಬಿಜಿನೆಸ್ ಮುನ್ನಡೆಸುವ ಯುವಕರಿಗೆ ಮಾರ್ಗದರ್ಶಿಯಾಯಿತು.
ಎನ್ಎಲ್ ಪಿ ಹಾಗೂ ಲೈಫ್ ಕೋಚ್ ಕಿರಣ ಟೆಂಗಿನಕಾಯಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಗೋಷ್ಠಿಯಲ್ಲಿ ಪಾಲ್ಗೊಂಡ ಯುವ ನಾಯಕರಿಗೆ ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ ಎಂಡಿ ವೀರೇಶ ಉಂಡಿ, ಇತರ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.