

ಹುಬ್ಬಳ್ಳಿ : ದಿ ಇಂಡಸ್ ಆಂತ್ರಪ್ರಿನರ್ಸ್ (ಟೈ) ವತಿಯಿಂದ "ಭವಿಷ್ಯಕ್ಕಾಗಿ ಸಿದ್ಧಗೊಂಡ ಉದ್ಯಮಿ' ಧ್ಯೇಯ ವಾಕ್ಯದಡಿ 11ನೇ ಉದ್ಯಮಶೀಲತಾ ಶೃಂಗಸಭೆಯನ್ನು ನಗರದ ಡೆನಿಸನ್ಸ್ ಹೋಟೆಲ್ ನಲ್ಲಿ ಫೆ. 1ರಿಂದ ಎರಡು ದಿನ ಆಯೋಜಿಸಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ್ ಪಾಟೀಲ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಉತ್ತರ ಕರ್ನಾಟಕ ಭಾಗದ ಮಹಿಳೆಯರು, ಯುವ ಉದ್ಯಮಿಗಳ ಉನ್ನತಿಯ ಉದ್ದೇಶದೊಂದಿಗೆ ವಿಶೇಷ ಗಮನ ಹರಿಸಿ ಸಮಾವೇಶದ ಮೂಲಕ ಈ ಭಾಗದಲ್ಲಿ ಉದ್ಯಮಶೀಲತೆ ಉತ್ತೇಜಿಸಲಾಗುತ್ತಿದೆ. ಅತಿದೊಡ್ಡ ಶೃಂಗಸಭೆಯ ಭಾಗವಾಗಲು ಈಗಾಗಲೇ ಅನೇಕರು ನೋಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು ಪಾಲ್ಗೊಳ್ಳಲು ಅವಕಾಶ ಇದೆ ಎಂದರು.
ಟೈಕಾನ್ ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್) ಜತೆಗೂಡಿ ನವೋದ್ಯಮಿಗಳಿಗೆ ಉತ್ತೇಜನ ನೀಡುತ್ತಿದ್ದು, ಶಾರ್ಕ್ ಟ್ಯಾಂಕ್ ಮಾದರಿಯಲ್ಲಿ ಉದಯೋನ್ಮುಖ ನವೋದ್ಯಮಿಗಳಿಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ವಿಜೇತರಿಗೆ ಟಾಪ್ ಐದು ನವೋದ್ಯಮಿ ಕಂಪನಿಗಳು 25 ಲಕ್ಷ ರೂ. ಹಾಗೂ ಮೇಲ್ಪಟ್ಟ ಹೂಡಿಕೆಯನ್ನು ಪಡೆಯಲಿವೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಈವರೆಗೆ 50 ಅರ್ಜಿಗಳು ಬಂದಿವೆ. ಕರ್ನಾಟಕ ಸರ್ಕಾರದ ನವೋದ್ಯಮ, ದೇಶಪಾಂಡೆ ಸ್ಟಾರ್ಟಅಪ್ ಮತ್ತು ಇತರ ಹಲವಾರು ಕ್ಷೇತ್ರದ ಪಾಲುದಾರರನ್ನು ಹೊಂದಿದೆ ಎಂದರು.
ಮಹಿಳಾ ಸಮಾವೇಶ:
ಟೈ ಮಹಿಳಾ ಸಮಾವೇಶದ 8ನೇ ಆವೃತ್ತಿಯನ್ನು ವಿಭಿನ್ನ ರೀತಿಯಲ್ಲಿ ಸಂಘಟಿಸಲಾಗುತ್ತಿದೆ. ಕಾರ್ಯಾಗಾರಗಳು, ವ್ಯಾಪಾರ ಯೋಜನೆ ಸ್ಪರ್ಧೆಗಳ ಮೂಲಕ ಮಹಿಳಾ ಉದ್ಯಮಿಗಳನ್ನು ನಿರಂತರವಾಗಿ ಬೆಂಬಲಿಸಲು ಉದ್ದೇಶಿಸಲಾಗಿದೆ ಎಂದು ಉದ್ಯಮಿ ದೀಪಾಲಿ ಗೋಟಡಕಿ ತಿಳಿಸಿದರು.
ಟೈ ಹುಬ್ಬಳ್ಳಿ ಮಹಿಳಾ ಉದ್ಯಮಿಗಳಿಗೆ ನೀಡಿದ ಅತ್ಯುತ್ತಮ ಬೆಂಬಲಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದೆ ಎಂದರು.
ಟೈ ಹುಬ್ಬಳ್ಳಿ 10 ವರ್ಷಗಳಿಂದ ಪ್ರತಿ ವರ್ಷ ಟೈಕಾನ್ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಸಮಾವೇಶಗಳಲ್ಲಿ ಪ್ರಪಂಚದ ಹಲವು ಉದ್ಯಮ ದಿಗ್ಗಜರು ಪಾಲ್ಗೊಂಡಿದ್ದಾರೆ. ಈ ವರ್ಷ ಟೈಟಾನ್ ನಲ್ಲಿಯೂ ಹಲವು ಮಹನೀಯರ ಪಾಲ್ಗೊಳ್ಳುವರು.
ನಮೋದ್ಯಮಿಗಳ ಅತ್ಯುತ್ತಮ ಸಾಧನೆ ಮತ್ತು ಕೊಡುಗೆಗಳನ್ನು ಗುರುತಿಸಿ ಪ್ರತಿ ವರ್ಷ ಟೈಕಾನ್ ಹುಬ್ಬಳ್ಳಿ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸುತ್ತ ಬರಲಾಗಿದೆ. ವರ್ಷದ ವಾಣಿಜ್ಯೋದ್ಯಮಿ ಉತ್ಪಾದನಾ, ಸೇವಾ, ನಮೋದ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗ ಮತ್ತು ವರ್ಷದ ಮಹಿಳಾ ಉದ್ಯಮಿ ಸೇರಿ ಐದು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಂಬಂಧಿಸಿದ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಅಥವಾ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಟೈಕಾನ್ ಸಂಚಾಲಕ ಪ್ರಶಾಂತ ಹೆಬಸೂರ್ ತಿಳಿಸಿದರು.
ಇವನಿಂಗ್ ವಿತ್ ಲೆಜೆಂಡ್ ನಲ್ಲಿ ಹಲವು ಪ್ರಮುಖರು ಪಾಲ್ಗೊಂಡು ಮಾರ್ಗದರ್ಶನ ಮಾಡುವರು. ಅಮುಲಿಕ್ ಸಿಂಗ್ ಚಾಯ್ ಪಾಯಿಂಟ್ ಸಿಇಒ, ವಿ. ಬಾಲಾಜಿ ಭಟ್ ಬೌನ್ವರ್ಟ್ ಪಾಲುದಾರ, ಡಾ. ಕಾಮಿನಿ ರಾವ್ ಮೆಡ್ಲೈನ್ ಅಕಾಡೆಮಿಕ್ಸ್ ಸಹ ಸಂಸ್ಥಾಪಕರು, ರವಿ ಮಂಥ, ಬೊಲ್ಲಂಟ್ ಇಂಡಸ್ಟ್ರೀಸ್ ಹೂಡಿಕೆದಾರರು ಸೇರಿ 16ಕ್ಕೂ ಹೆಚ್ಚು ದಿಗ್ಗಜರು ಭಾಗವಹಿಸುವರು.
ಫೆ. 1ರಂದು ಬೆಳಗ್ಗೆ 11ಕ್ಕೆ ಸಚಿವ ಪ್ರಿಯಾಂಕ್ ರ್ಖಗೆ ಅವರು ಸಮ್ಮೇಳನ ಉದ್ಘಾಟನೆ ನೆರವೇರಿಸುವರು. ಶಾಸಕರು, ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಟೈ ಕಾರ್ಯದರ್ಶಿ ಖಜಾಂಚಿ ನಾಗರಾಜ್ ಕೊಟಗಿ, ಸಂತೋಷ, ದಾರೇಶ ಇತರರು ಗೋಷ್ಠಿಯಲ್ಲಿದ್ದರು.
ನಾಮ ನಿರ್ದೇಶನ ಅಥವಾ ಅರ್ಜಿ ಸಲ್ಲಿಸಲು ಟೈ ವೆಬ್ ಸೈಟ್ ಗೆ ಲಾಗ್ ಇನ್ ಮಾಡಬಹುದು.