ಕೆಬಿಜೆಎನ್‌ಎಲ್ ಅಧಿಕಾರಿ ಬುಡಕ್ಕೆ ನೀರು !

VJP Shashikala Jolle
Published on

ಪರಶುರಾಮ ಭಾಸಗಿ ವಿಜಯಪುರ

ತಿಡಗುಂದಿ ಶಾಖಾ ಕಾಲುವೆ ಉದ್ಘಾಟನೆಯೋ? ಗಂಗಾಪೂಜೆಯೋ….? ಒಟ್ಟಿನಲ್ಲಿ ಶಾಸಕ ತ್ರಯರು ಮಾಡಿದ ಕಾರ್ಯಕ್ರಮವೊಂದರ ಪರಿಣಾಮ ಕೆಬಿಜೆಎನ್‌ಎಲ್ ಅಧಿಕಾರಿ ಬುಡಕ್ಕೆ ನೀರು ಬಂದಿದ್ದಂತೂ ನಿಜ !
ಹೌದು, ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿ ನಡುವೆಯೋ ಏ. 24 ರಂದು ನಾಗಠಾಣ ವಿಧಾನ ಸಭೆ ಕ್ಷೇತ್ರದ ಬುರಾಣಪುರ ಬಳಿ ತಿಡಗುಂದಿ ಶಾಖಾ ಕಾಲುವೆಗೆ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಸಹ ಪಾಲ್ಗೊಂಡಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.

ಅಧಿಕಾರಿ ಮೇಲೆ ಕ್ರಮ

ಅಧಿಕಾರಿ ನಡೆ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಮಾಡಲಾಗಿದ್ದು ಇದರಲ್ಲಿ ಅಧಿಕಾರಿ ಸಹ ಪಾಲ್ಗೊಂಡಿದ್ದಾರೆ. ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇತ್ತ ಜಿಲ್ಲೆ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ ಅವರು ಕಾರ್ಯಕ್ರಮದ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದು, ಜಿಲ್ಲಾಡಳಿತ ಕೆಬಿಜೆಎನ್‌ಎಲ್ ಅಧಿಕಾರಿಗಳಿಂದ ವಿವರಣೆ ಬಯಸಿದ್ದಾಗಿ ತಿಳಿದು ಬಂದಿದೆ.

ಉದ್ಘಾಟನೆಯೋ-ಪೂಜೆಯೋ?

ಈ ಕಾರ್ಯಕ್ರಮ ಖಾಸಗಿಯಾಗಿದ್ದು ಸಾಂಪ್ರದಾಯಿಕವಾಗಿ ಗಂಗಾಪೂಜೆ ನೆರವೇರಿಸಿದ್ದಾಗಿ ಶಾಸಕರ ಒಂದು ಬಣ ಸಮಜಾಯಿಷಿ ನೀಡಿದೆ. ಪ್ರತಿಬಣದ ಶಾಸಕ ಯಶವಂತರಾಯಗೌಡ ಪಾಟೀಲರು ಉದ್ಘಾಟನೆ ಎನ್ನುವುದಾದರೆ ಇದೊಂದು ಸರ್ಕಾರಿ ಕಾರ್ಯಕ್ರಮವೇ ಆಗಿರಬೇಕಲ್ಲವೇ? ಖಾಸಗಿಯಾಗಿದ್ದರೆ ಸರ್ಕಾರಿ ಅಧಿಕಾರಿ ಪಾಲ್ಗೊಳ್ಳುವ ಅವಶ್ಯಕತೆ ಏನಿತ್ತೆಂದು ಪ್ರಶ್ನಿಸಿದ್ದಾರೆ.
ಈ ಕಾರ್ಯಕ್ರಮದ ವರದಿ ಮತ್ತು ಜಾಹೀರಾತು ಗಮನಿಸಲಾಗಿ ಗಂಗಾ ಪೂಜೆ ಮತ್ತು ಉದ್ಘಾಟನೆ ಎಂಬ ಎರಡೂ ಪದ ಬಳಕೆಯಾಗಿದೆ. ಉದ್ಘಾಟನೆ ಎನ್ನುವುದಾದರೆ ಶಿಷ್ಟಾಚಾರ ಪ್ರಕಾರ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕಿತ್ತು ಎಂಬುದು ಶಾಸಕ ಯಶವಂತರಾಯಗೌಡ ಪಾಟೀಲರ ಅಭಿಮತ. ಖಾಸಗಿಯಾಗಿದ್ದರೂ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿತ್ತಲ್ಲವೇ? ಅದೂ ಅಲ್ಲದೆ, ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸುವುದು ಅವಶ್ಯಕತೆ ಇತ್ತಾ ಎಂಬುದು ಶಾಸಕರ ಪ್ರಶ್ನೆ.

ಅನುಮತಿ ಪ್ರಶ್ನೆ

ಲಾಕ್‌ಡೌನ್ ಸಂದರ್ಭ ಪೂಜೆ ನೆರವೇರಿಸಲು ಅನುಮತಿ ನೀಡಿದ್ದು ಯಾರು? ಪೂಜೆ ನೆರವೇರಿಸದೆ ಇದ್ದರೆ ನೀರು ಮರಳಿ ಹೋಗುತ್ತಿತ್ತಾ? ಎಂಬ ಪ್ರಶ್ನೆ ಶಾಸಕ ಯಶವಂತರಾಯಗೌಡರದ್ದು. ಇದೀಗ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ‘ಗಂಗಾಪೂಜೆ ನಮ್ಮ ಸಂಸ್ಕೃತಿ’ ಎಂದಿದ್ದಾರಲ್ಲದೆ, ಶಾಸಕ ಯಶವಂತರಾಯಗೌಡ ಪಾಟೀಲರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಲು ಪರವಾನಗಿ ಪಡೆದಿದ್ದರಾ? ಎಂದು ಸವಾಲು ಹಾಕಿದ್ದಾರೆ. ಹಾಗೆ ನೋಡಿದರೆ ಖಾಸಗಿ ಹೋಟೆಲ್ ಸಹಿತ ಎಲ್ಲೂ ಜನ ಸೇರಬಾರದೆಂದು ಲಾಕ್‌ಡೌನ್ ನಿಯಮ. ಹಾಗಿದ್ದೂ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಕೂಡ ಸುದ್ದಿಗೋಷ್ಠಿ ನಡೆಸಲು ಅನುಮತಿ ಪಡೆಯಬೇಕಿತ್ತು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ನೀರ ರಾಜಕಾರಣ ಮುಂದುವರಿದಿದ್ದು, ಜನಪ್ರತಿನಿಧಿಗಳು ‘ಲಾಕ್‌ಡೌನ್’ನಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಪೈಪೋಟಿಗಿಳಿದವರಂತೆ ಪೂಜೆ, ಪುನಸ್ಕಾರ ನಡೆಸಿದ್ದರಿಂದ ಅಧಿಕಾರಿಗಳ ಬುಡಕ್ಕೆ ನೀರು ಬರುತ್ತಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುವುದು ತಪ್ಪು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ನೀರಾವರಿ ಇಲಾಖೆಗೆ ಪತ್ರ ಬರೆದಿದ್ದು, ವಿವರಣೆ ಕೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಾರದೆ ಇಂಥ ಕಾರ್ಯಕ್ರಮ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಏನೇ ಮಾಡಿದರೂ ಇದರಲ್ಲಿ ಅಧಿಕಾರಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ.
ಶಶಿಕಲಾ ಜೊಲ್ಲೆ, ಉಸ್ತುವಾರಿ ಮಂತ್ರಿ

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net